Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ಕೊರೋನಾ ತ್ರಿಶತಕ, ಬೆಂಗಳೂರಲ್ಲಿ ಶತಕ!

ಮತ್ತೆ ಕೊರೋನಾ ತ್ರಿಶತಕ, ಬೆಂಗಳೂರಲ್ಲಿ ಶತಕ| ರಾಜ್ಯದಲ್ಲಿ 322 ಹೊಸ ಕೇಸು ದೃಢ; 8 ಸಾವು| ಬೆಂಗಳೂರಲ್ಲಿಯೇ 107 ಮಂದಿಗೆ ಸೋಂಕು| ಐಸಿಯುಗೆ ಮತ್ತೆ 40 ಜನ| ಸಮಾಧಾನವೆಂದರೆ ನಿನ್ನೆ 274 ಸೇರಿ ಈವರೆಗೆ 6003 ಮಂದಿ ಗುಣಮುಖ| 9721 ಸೋಂಕಿತರ ಪೈಕಿ 3563 ಕೇಸು ಸಕ್ರಿಯ

New 322 Coronavirus Cases Reported In Karnataka 107 Are From Bengaluru
Author
Bangalore, First Published Jun 24, 2020, 7:47 AM IST

ಬೆಂಗಳೂರು(ಜೂ.24): ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 322 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಮತ್ತೆ ಎಂಟು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9721ಕ್ಕೇರಿದ್ದು, ಮೃತಪಟ್ಟಸೋಂಕಿತರ ಸಂಖ್ಯೆ 150 ಮುಟ್ಟಿದೆ.

ಹೊಸ ಸೋಂಕಿತರಲ್ಲಿ ಬೆಂಗಳೂರಿನವರೇ ಹೆಚ್ಚಿದ್ದು, ನಗರದ 107 ಜನರಿಗೆ ಸೋಂಕು ತಗುಲಿದೆ. ತನ್ಮೂಲಕ ಸತತ ಮೂರನೇ ದಿನ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಬಳ್ಳಾರಿ: ಒಂದೇ ದಿನ ಮೂವರನ್ನ ಬಲಿ ಪಡೆದ ಡೆಡ್ಲಿ ಕೊರೋನಾ..!

ಮೃತಪಟ್ಟಎಂಟು ಮಂದಿಯಲ್ಲಿ ಆರು ಮಂದಿ ಬೆಂಗಳೂರಿನವರಾಗಿದ್ದಾರೆ. ಇಬ್ಬರು ವೃದ್ಧರು ಸೇರಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ನಗರದಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 70 ವರ್ಷದ ಓರ್ವ ಪುರುಷ, ಬಳ್ಳಾರಿಯಲ್ಲಿ 85 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಾವಿನ ಸಂಖ್ಯೆ ಬೆಂಗಳೂರಿನಲ್ಲಿ 73ಕ್ಕೆ, ದಕ್ಷಿಣ ಕನ್ನಡದಲ್ಲಿ 7ಕ್ಕೆ, ಬಳ್ಳಾರಿಯಲ್ಲಿ 4ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಬೆಂಗಳೂರು ನಗರ ಒಂದರಲ್ಲೇ 107 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 50 ಪ್ರಕರಣಗಳು ವಿಷಮ ಶೀತ ಜ್ವರದಿಂದ ಬಳಲುತ್ತಿದ್ದವರಿಗೆ ಸೋಂಕು ದೃಢಪಟ್ಟಿದೆ. 22 ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಉಳಿದ 35 ಪ್ರಕರಣಗಳು ಅಂತಾರಾಜ್ಯ ಪ್ರವಾಸ ಹಿನ್ನೆಲೆ, ಕಂಟೈನ್ಮೆಂಟ್‌ ಪ್ರದೇಶ ಭೇಟಿ ಕಾರಣದಿಂದ ಹರಡಿವೆ.

ಉಳಿದಂತೆ ಬಳ್ಳಾರಿಯಲ್ಲಿ 53, ಬೀದರ್‌ನಲ್ಲಿ 22, ಮೈಸೂರು 21, ವಿಜಯಪುರ 16, ಯಾದಗಿರಿ 13, ಉಡುಪಿ 11, ಗದಗ 9, ದಕ್ಷಿಣ ಕನ್ನಡ, ಕೋಲಾರ ತಲಾ 8, ಹಾಸನ 7, ಕಲಬುರಗಿ 6, ಚಿಕ್ಕಬಳ್ಳಾಪುರ, ಶಿವಮೊಗ್ಗ ತಲಾ 5, ಧಾರವಾಡ, ತುಮಕೂರು, ಚಾಮರಾಜನಗರ ತಲಾ 4, ರಾಯಚೂರು, ಉತ್ತರ ಕನ್ನಡ ತಲಾ 3, ಮಂಡ್ಯ, ಬೆಳಗಾವಿ, ದಾವಣಗೆರೆ ತಲಾ 2 ಹಾಗೂ ಕೊಡಗಿನಲ್ಲಿ ಒಂದು ಪ್ರಕರಣ ದಾಖಲಾಗಿದೆ.

‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌: 34 ಕೋಟಿ ರು. ಅನುದಾನ ಮಂಜೂರು!

ಒಂದೇ ದಿನ 40 ಮಂದಿ ಐಸಿಯುಗೆ:

ಈ ಮಧ್ಯೆ, ಆರೋಗ್ಯ ಸ್ಥಿತಿ ಗಂಭೀರಗೊಂಡು ಚಿಕಿತ್ಸೆಗಾಗಿ ಐಸಿಯುಗೆ ದಾಖಲಿಸಿರುವವರ ಸಂಖ್ಯೆ ಮತ್ತಷ್ಟುಹೆಚ್ಚಾಗಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಮಂಗಳವಾರ 40 ಮಂದಿ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ತುರ್ತು ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ. ಇದರಿಂದ ಐಸಿಯುಗೆ ದಾಖಲಾದವರ ಸಂಖ್ಯೆ 120ಕ್ಕೇರಿದೆ.

ಈ ಪೈಕಿ ಬೆಂಗಳೂರಿನಲ್ಲಿ ಒಂದೇ ದಿನ 32 ಮಂದಿ ಸೋಂಕಿತರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಸದ್ಯ ಬೆಂಗಳೂರು 71, ಕಲಬುರಗಿ 11, ಧಾರವಾಡ ಮತ್ತು ತುಮಕೂರು ತಲಾ 6, ಬಳ್ಳಾರಿ 5, ಬೀದರ್‌, ದಾವಣಗೆರೆ, ವಿಜಯಪುರ ಹಾಗೂ ರಾಮನಗರದಲ್ಲಿ ತಲಾ 3, ಉಡುಪಿ ಮತ್ತು ದಕ್ಷಿಣ ಕನ್ನಡ ತಲಾ 2, ಹಾಸನ, ಹಾವೇರಿ, ಬೆಳಗಾವಿ, ರಾಯಚೂರು ಹಾಗೂ ಚಾಮರಾಜ ನಗರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 120 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

6000 ದಾಟಿದ ಗುಣಮುಖರು:

ರಾಜ್ಯದಲ್ಲಿ ಮಂಗಳವಾರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸೋಂಕಿತರ ಪೈಕಿ 274 ಮಂದಿ ಗುಣಮುಖರಾಗಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 6004 ಆಗಿದೆ. ಉಳಿದ 3563 ಸಕ್ರಿಯ ಸೋಂಕಿತರು ಆಸ್ಪತ್ರೆ ಮತ್ತು ಕೊರೊನಾ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 10,569 ಶಂಕಿತರ ಸೋಂಕು ಪರೀಕ್ಷೆ ವರದಿ ಬಂದಿದ್ದು, 322 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಹೊರರಾಜ್ಯ ಪ್ರಯಾಣ ಹಿನ್ನೆಲೆ 64 ಮಂದಿ, ಹೊರದೇಶ ಪ್ರಯಾಣ ಹಿನ್ನೆಲೆ 5 ಮಂದಿ ಹೊಂದಿದ್ದಾರೆ.

Follow Us:
Download App:
  • android
  • ios