ಮೆಟ್ರೋ ನೌಕರರ ದಿಢೀರ್ ಪ್ರತಿಭಟನೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 12:29 PM IST
Namma Metro employees go on a night protest
Highlights

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೌಕರರಿಂದ ಧರಣಿ| ವೇತನ ಪರಿಷ್ಕರಣೆ, ನೌಕರರ ಸಂಘಕ್ಕೆ ಮಾನ್ಯತೆಗಾಗಿ ಬೇಡಿಕೆ| 2 ಗಂಟೆ ಕಾಲ ರಾಜಿ ಸಂಧಾನ, ಭರವಸೆ ಬಳಿಕ ಧರಣಿ ಅಂತ್ಯ

ಬೆಂಗಳೂರು[ಜ.12]: ವೇತನ ಪರಿಷ್ಕರಣೆ ಮತ್ತು ನೌಕರರ ಸಂಘಟನೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಗುರುವಾರ ತಡರಾತ್ರಿ ನಮ್ಮ ಮೆಟ್ರೋ ನೌಕರರು ದಿಢೀರ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರುವ ಮುನ್ನವೇ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಸಿಬ್ಬಂದಿ ಮುಷ್ಕರ ಕೈಬಿಟ್ಟಘಟನೆ ನಡೆಯಿತು. ಗುರುವಾರ ತಡರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸುಮಾರು 500ಕ್ಕೂ ಹೆಚ್ಚು ನೌಕರರು, ವೇತನ ತಾರತಮ್ಯ ನಿವಾರಿಸಬೇಕು, ಕಾರ್ಮಿಕ ಸಂಘಟನೆಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಏಕಾಏಕಿ ಧರಣಿ ನಡೆಸಿದರು. ಇದರಿಂದ ಇಡೀ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಆದರೆ, ಅಷ್ಟರಲ್ಲಾಗಲೇ ಮೆಟ್ರೋ ರೈಲು ಸಂಚಾರ ಪೂರ್ಣಗೊಳಿಸಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯುಂಟಾಗಲಿಲ್ಲ.

ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲೇ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತ ಸಿಬ್ಬಂದಿಯನ್ನು ನಿಲ್ದಾಣದಿಂದ ಹೊರಗೆ ಹೋಗುವಂತೆ ಸೂಚಿಸಿದರೂ ಯಾರು ಸ್ಪಂದಿಸಲಿಲ್ಲ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಬೇಡಿಕೆ ಈಡೇರಿಸುವ ವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಮೆಟ್ರೊ ಸಿಬ್ಬಂದಿ ಪಟ್ಟು ಹಿಡಿದು ಕುಳಿತರು.

ಪೊಲೀಸ್‌ ಅಧಿಕಾರಿಗಳು ಮತ್ತು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ಅವರನ್ನು ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ರಾತ್ರಿ ಸುಮಾರು 2ಕ್ಕೆ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಜಯ್‌ಸೇಠ್‌ ಮುಷ್ಕರ ನಿರತ ಸಿಬ್ಬಂದಿಯೊಂದಿಗೆ ಎರಡು ಗಂಟೆಗಳ ಕಾಲ ರಾಜೀ ಸಂಧಾನ ನಡೆಸಿದರು.

ಜ.14ಕ್ಕೆ ಸಭೆ: ತೀರ್ಮಾನ

ದೇಶದ ಎಲ್ಲ ಮೆಟ್ರೋಗಳಲ್ಲಿ ಈಗಾಗಲೇ ಮೂರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಲಾಗಿದೆ. ಆದರೆ ನಮ್ಮ ಮೆಟ್ರೋ ಸಿಬ್ಬಂದಿಗೆ ಇದುವರೆಗೂ ವೇತನ ಪರಿಷ್ಕರಣೆ ಆಗಿಲ್ಲ. ಗುತ್ತಿಗೆ ನೌಕರರಿಗೆ ಬೇಕೆಂದಾಗ ವೇತನ ಹೆಚ್ಚಳ ಮಾಡಲಾಗುತ್ತಿದೆ. ಆದರೆ, ಸುಮಾರು 1172ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಜತೆಗೆ ಸಿಬ್ಬಂದಿಗಳ ಸಮಸ್ಯೆ ಹೇಳಿಕೊಳ್ಳಲು ನೌಕರರ ಸಂಘಟನೆ ಅವಶ್ಯಕತೆ ಇದ್ದು, ಅದಕ್ಕೆ ಮಾನ್ಯತೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಿಬ್ಬಂದಿಗಳ ಬೇಡಿಕೆ ಆಲಿಸಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ಜ.14ರಂದು ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸಭೆ ನಡೆಸಲಾಗುವುದು. ಅಲ್ಲಿನ ನಿರ್ಣಯದಂತೆ ಒಂದು ತಿಂಗಳೊಳಗಾಗಿ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಅಜಯ್‌ಸೇಠ್‌ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಸಿಬ್ಬಂದಿ ಮುಷ್ಕರ ಕೈಬಿಡಲು ನಿರ್ಧರಿಸಿದರು.

loader