ಬೆಂಗಳೂರು (ಮೇ. 11): ಪ್ರಸಕ್ತ ಕೋವಿಡ್‌ ಸಂಕಷ್ಟಸಮಯದಲ್ಲಿ ಪಕ್ಷದ ಮುಖಂಡರು ರಾಜಕೀಯ ಮಾಡುವುದಾಗಲಿ ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಾಕೀತು ಮಾಡಿದ್ದಾರೆ.

ಜನರ ರಕ್ಷಣೆ ನಮ್ಮ ಜವಾಬ್ದಾರಿ. ಈ ಬಗ್ಗೆ ಪಕ್ಷದ ಶಾಸಕರೂ ಸೇರಿದಂತೆ ಎಲ್ಲ ಮುಖಂಡರಿಗೆ ಸ್ಪಷ್ಟಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ‘ಸೇವೆಯೇ ಸಂಘಟನೆ’ ಎಂಬ ತತ್ವದ ಅಡಿ ರಾಜ್ಯಾದ್ಯಂತ ಕೋವಿಡ್‌ ನಿಯಂತ್ರಣಕ್ಕಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮನ್ವಯತೆಯಲ್ಲಿ ತೊಡಗಿರುವ ಅವರು ಸೋಮವಾರ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡರು.

ಸಂದರ್ಶನದ ಪ್ರಮುಖ ಭಾಗ ಕೆಳಕಂಡಂತಿದೆ:

ಈ ಸನ್ನಿವೇಶದಲ್ಲೂ ನಿಮ್ಮ ಪಕ್ಷದ ಕೆಲವು ಮುಖಂಡರು ರಾಜಕೀಯ ಪ್ರೇರಿತ ಇರಿಸು ಮುರಿಸಿನ ಹೇಳಿಕೆಗಳನ್ನು ನೀಡುತ್ತಿದ್ದಾರಲ್ಲ?

-ಯಾರೇ ಆಗಲಿ. ಈ ಸಂಕಷ್ಟಸಮಯದಲ್ಲಿ ರಾಜಕೀಯ ಮಾಡುವುದಾಗಲಿ ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡಬಾರದು. ಅದು ಸರಿಯಲ್ಲ. ನೀವು ಜನಪ್ರತಿನಿಧಿಯಾದರೆ ಜನರ ಸೇವೆ ಮಾಡಿ. ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಿ. ಪಕ್ಷ ಹಾಗೂ ಸರ್ಕಾರ ಒಂದಾಗಿ ಕೋವಿಡ್‌ ನಿಯಂತ್ರಿಸಬೇಕು. ಇದರಲ್ಲಿ ಎರಡನೇ ಮಾತಿಲ್ಲ. ಪಕ್ಷದ ಯಾವುದೇ ಮುಖಂಡರು ಈ ಹೊತ್ತಿನಲ್ಲಿ ಇತರ ರಾಜಕಾರಣ ಕುರಿತು ಮಾತನಾಡುವಂತಿಲ್ಲ. ಜನರ ರಕ್ಷಣೆ ನಮ್ಮ ಜವಾಬ್ದಾರಿ. ಈ ಬಗ್ಗೆ ಸ್ಪಷ್ಟಸೂಚನೆ ನೀಡಲಾಗಿದೆ.

ಪ್ರತಿಪಕ್ಷಗಳ ಮುಖಂಡರೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರಲ್ಲ?

-ಜನ ನಮಗೆ ಆಶೀರ್ವಾದ ಮಾಡಿರುವುದು ಸೇವೆ ಮಾಡಬೇಕು ಎಂಬ ಉದ್ದೇಶದಿಂದಲೇ ಹೊರತು ರಾಜಕಾರಣ ಮಾಡು ಎಂದಲ್ಲ. ತಪ್ಪುಗಳಿರಬಹುದು. ಯುದ್ಧ ಕಾಲದಲ್ಲಿ ತಪ್ಪುಗಳನ್ನು ತೋರಿಸಿ ಮಾತನಾಡುವುದರಿಂದ ಪ್ರಯೋಜನವಿಲ್ಲ. ಈ ಕೋವಿಡ್‌ ಎಂಬ ಯುದ್ಧದಲ್ಲಿ ಎಲ್ಲರೂ ಬದುಕುಳಿದರೆ ತಾನೆ ರಾಜಕಾರಣ ಮಾಡುವುದಕ್ಕೆ ಸಾಧ್ಯ. ಕೊರೋನಾಗೆ ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಎಂಬುದಿಲ್ಲ. ಅದಕ್ಕೆ ಎಲ್ಲರೂ ಒಂದೇ. ಹೀಗಾಗಿ, ಸದ್ಯದ ಮಟ್ಟಿಗೆ ರಾಜಕಾರಣ ಬಿಟ್ಟು ಒಂದಾಗಿ ಕೆಲಸ ಮಾಡೋಣ. ಸಲಹೆ ಕೊಡಿ. ಅದು ಮುಖ್ಯ. ಆದರೆ, ಕೇವಲ ಟೀಕೆಗಳನ್ನೇ ಮಾಡುವುದು ಅಥವಾ ತಪ್ಪುಗಳನ್ನೇ ಎತ್ತಿ ಆಡುವುದರಿಂದ ಯಾರಿಗೂ ಉಪಯೋಗವಾಗುವುದಿಲ್ಲ.

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಪಕ್ಷದ ವತಿಯಿಂದ ಏನೆಲ್ಲ ಮಾಡುತ್ತಿದ್ದೀರಿ?

-ನಾವು ಎಲ್ಲ ಜಿಲ್ಲೆಗಳಲ್ಲಿ ಸೇವಾ ಹಿ ಸಂಘಟನ್‌ ಮಾಡಿದ್ದೇವೆ. 37 ಜಿಲ್ಲೆಗಳಲ್ಲಿ ವಾರ್‌ ರೂಂ ಮತ್ತು ಕೇರ್‌ ಸೆಂಟರ್‌ ಆರಂಭಿಸಿ ಆ ಮೂಲಕ 13 ರೀತಿಯ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಆಸ್ಪತ್ರೆಗಳ ಮಾಹಿತಿ, ವೆಂಟಿಲೇಟರ್‌ ಕುರಿತು ಮಾಹಿತಿ, ಆಂಬ್ಯುಲೆನ್ಸ್‌ ಸೇವೆ, ಲಸಿಕೆ ಬಗ್ಗೆ ಜಾಗೃತಿ, ಮಾಸ್ಕ್‌ಗಳ ವಿತರಣೆ, ಕೊರೋನಾ ಪೀಡಿತ ಮನೆಗಳಿಗೆ ಆಹಾರ ಪೊಟ್ಟಣ ವಿತರಣೆ, ಆಮ್ಲಜನಕ ಬೇಕಾದವರಿಗೆ ಸ್ಪಂದನೆ, ರೆಮ್‌ಡೆಸಿವಿರ್‌ ಔಷಧಿ ಬೇಕಾದರೆ ಸಹಾಯ ಹಸ್ತ, ಶವಸಂಸ್ಕಾರ, ವಯಸ್ಸಾದ ಕೊರೋನಾ ಪೀಡಿತರಿಗೆ ಸೇವೆ, ರಕ್ತದಾನ ಕಾರ್ಯಕ್ರಮಗಳು, ಟೆಲಿಮೆಡಿಸಿನ್‌, ಐಸೋಲೇಷನ್‌ ಕೇಂದ್ರ ಮಾಹಿತಿಗಳ ಕುರಿತು ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜನಸೇವಾ ಸಂಸ್ಥೆ ಜತೆಗೂಡಿ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ, ಸೇಡಂ, ಬೀದರ್‌ ಕೇಂದ್ರದಲ್ಲಿ 500 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಇರುವವರಿಗೆ ತಾತ್ಕಾಲಿಕ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಲ್ಲಿ ಮೂರು ಕೇಂದ್ರದಲ್ಲಿ ಐಸೋಲೇಷನ್‌ ಕೇಂದ್ರಗಳನ್ನು ತೆರೆಯಲಾಗಿದೆ.

ರಾಜ್ಯದ ಅನೇಕ ಭಾಗಗಳಲ್ಲಿ ನಿಮ್ಮ ಪಕ್ಷದ ಜನಪ್ರತಿನಿಧಿಗಳು ಮನೆಯಿಂದ ಹೊರಗೆ ಬಂದು ಕೋವಿಡ್‌ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ದೂರಿದೆ?

-ಎಲ್ಲರೂ ಭಯಪಡದೇ ಮನೆಯಿಂದ ಹೊರಗೆ ಬಂದು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಾನು ಪಕ್ಷದ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಪ್ರತಿನಿತ್ಯ ವೆಬ್‌ ಮೀಟಿಂಗ್‌ಗಳನ್ನು ಮಾಡುತ್ತಿದ್ದೇವೆ. ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ಚರ್ಚಿಸುವ ಮೂಲಕ ಕೋವಿಡ್‌ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ಕೋವಿಡ್‌ ನಿಯಂತ್ರಣದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಬಲವಾಗಿ ಕೇಳಿಬರುತ್ತಿದೆ?

-ಸರ್ಕಾರ ವಿಫಲವಾಗಿಲ್ಲ. ಕೋವಿಡ್‌ನ ಮೊದಲ ಅಲೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ. ಇದೀಗ ಎರಡನೇ ಅಲೆ ಕೇವಲ ಕರ್ನಾಟಕ ಮಾತ್ರ ಅಲ್ಲ, ದೇಶದ ಇತರ ಎಲ್ಲ ರಾಜ್ಯಗಳಲ್ಲೂ ಕೈಮೀರಿ ಹೋಗಿದೆ. ಇದರ ವೇಗವೇ ಹಾಗಿದೆ.

ನಿರೀಕ್ಷಿಸಿದ ಮಟ್ಟಕ್ಕಿಂತ ವೇಗವಾಗಿ ಕೋವಿಡ್‌ ಎರಡನೇ ಅಲೆ ಬಂದಿದೆ. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ವೆಂಟಿಲೇಟರ್‌ ಮತ್ತಿತರ ಸೌಲಭ್ಯಗಳು ಇಲ್ಲ ಎಂಬ ಪ್ರಶ್ನೆಯನ್ನು ಪ್ರತಿಪಕ್ಷದವರು ಕೇಳುತ್ತಿದ್ದಾರೆ. ಆದರೆ, ಸುದೀರ್ಘ ಅವಧಿ ಅಧಿಕಾರ ನಡೆಸಿದ ವೇಳೆ ಯಾಕೆ ಸೌಲಭ್ಯಗಳನ್ನು ಕಲ್ಪಿಸಲಿಲ್ಲ ಎಂಬುದನ್ನು ನಾವು ಕೇಳಬೇಕಾಗುತ್ತದೆ. ಜನ ಮತ್ತು ಜೀವನ ಎರಡನ್ನೂ ರಕ್ಷಿಸುವ ಹೊಣೆ ಎಲ್ಲ ರಾಜಕೀಯ ಪಕ್ಷಗಳ ಮೇಲೂ ಇದೆ.

ರಾಜ್ಯದಲ್ಲಿ ಎರಡು ವಾರಗಳ ಲಾಕ್‌ಡೌನ್‌ ಜಾರಿಗೊಳಿಸಿದ್ದು ತುಂಬಾ ತಡವಾಯಿತಲ್ಲವೇ?

-ನೋಡಿ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಜನರಿಗೆ ಭಯವಿಲ್ಲ. ಎರಡು ತಿಂಗಳ ಹಿಂದೆಯೇ ಲಾಕ್‌ಡೌನ್‌ ಮಾಡಿದ್ದರೆ ಆಗಲೂ ಸರ್ಕಾರವನ್ನು ಟೀಕಿಸುತ್ತಿದ್ದರು. ಎಲ್ಲೂ ಕೋವಿಡ್‌ ಇಲ್ಲ, ಇಷ್ಟುಅವಸರದಲ್ಲಿ ಲಾಕ್‌ಡೌನ್‌ ಯಾಕೆ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದರು.

ಕರ್ನಾಟಕಕ್ಕೆ ಅಗತ್ಯ ಕೇಂದ್ರ ಸರ್ಕಾರ ನೆರವು ನೀಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ?

-ಹಾಗೇನಿಲ್ಲ. ಏನು ಕೊಡಬೇಕೊ ಅದನ್ನು ಕೊಡುವ ಪ್ರಯತ್ನ ನಡೆದಿದೆ. ಈಗ ರಾಜ್ಯ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಮತ್ತು ಡಿ.ವಿ.ಸದಾನಂದಗೌಡರನ್ನು ಈ ಕೆಲಸಕ್ಕೆ ಜೋಡಣೆ ಮಾಡಲಾಗಿದೆ. ಆಕ್ಸಿಜನ್‌ ಸಮಸ್ಯೆ ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಸಮಸ್ಯೆ ಇದ್ದುದರಿಂದ ಕೇಂದ್ರ ಸರ್ಕಾರ ಇದನ್ನು ನಿಯಂತ್ರಿಸುತ್ತಿತ್ತು. ಹೀಗಿರುವಾಗ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನೂ ಗಮನಿಸಬೇಕಾಗುತ್ತದೆ.

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಕಾಡುತ್ತಿದೆಯೇ?

-ಇಲ್ಲ. ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕೆ ಪಕ್ಷ ಮತ್ತು ರಾಜ್ಯ ಸರಕಾರಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿವೆ. ಜನರ ಪ್ರಾಣ ರಕ್ಷಿಸುವ ವಿಚಾರಕ್ಕೆ ಗರಿಷ್ಠ ಆದ್ಯತೆ ಕೊಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ.