ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ರಾಜ ವಂಶದ ಕುಡಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೂಲತಃ ರಾಜರ ಕುಡಿಯಲ್ಲ. ಕೇವಲ ರಾಜರ ದತ್ತುಪುತ್ರ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.18): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೂಲತಃ ರಾಜರ ಕುಡಿಯಲ್ಲ. ಅವರು ಕೇವಲ ಮೈಸೂರು ರಾಜರ ದತ್ತುಪುತ್ರ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ತಮ್ಮ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, ಕಳೆದ ಐದು ವರ್ಷಗಳಲ್ಲಿ ಸಂಸದ ಪ್ರತಾಪ್ ಸಿಂಹ ಏನೂ ಸರಿಯಾಗಿ ಕೆಲಸ ಮಾಡಲಿಲ್ಲ. ಅದನ್ನು ಅವರೇ ತಮಗೆ ಟಿಕೆಟ್ ಕೈತಪ್ಪಿದಾಗ ಹೇಳಿಕೊಂಡರು. ಇನ್ನು ಲೋಕಸಭೆಯಲ್ಲಿ ತಲೆಯ ಲೆಕ್ಕಕ್ಕಾಗಿ ಯದುವೀರ್ ಅವರನ್ನು ಗೆಲ್ಲಿಸಿ ಕಳುಹಿಸಿದರೆ ಎಂತಹ ಅಭಿವೃದ್ಧಿ ಕೆಲಸಗಳು ನಡೆಯಬಹುದು ನೀವೆ ಚಿಂತಿಸಿ ಎಂದಿದ್ದರು. ಹೀಗಾಗಿಯೇ ನಾನು ಕೊಡಗು ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಎಐಸಿಸಿ 25 ಗ್ಯಾರಂಟಿಗಳ ಪ್ರಣಾಳಿಕೆಯನ್ನು ಸಿದ್ಧಗೊಳಿಸಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಕೊಟ್ಟ ಖಲೀಮುಲ್ಲಾ ಖಾನ್‌ಗೆ ಸ್ಥಾನಮಾನವೇ ಸಿಕ್ಕಿಲ್ಲ: ಎಚ್.ವಿಶ್ವನಾಥ್!
ವಿಧಾನಸಭಾ ಚುನಾವಣೆ ವೇಳೆಯಲ್ಲೂ ನಮ್ಮ ಪಕ್ಷವು 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಐದನ್ನು ಜಾರಿ ಮಾಡಿದೆ. ಹಾಗೆಯೇ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಯೋಜನೆಗಳನ್ನು ಜಾರಿ ಮಾಡಲಿದೆ ಎಂದಿದ್ದಾರೆ. ಆದರೆ 2014 ರಲ್ಲಿ ಮೈಸೂರಿಗೆ ಬಂದಿದ್ದ ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುವುದಾಗಿಯೂ ನಂತರ 2019 ರಲ್ಲಿ ಸ್ವಿಡ್ಜರ್ಲ್ಯಾಂಡ್ ಮಾಡುವುದಾಗಿಯೂ ಹೇಳಿದ್ದರು. ಎರಡು ಬಾರಿಯೂ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದ್ದಾರೆ. 10 ತಿಂಗಳಲ್ಲಿ ಕೊಡಗಿನಲ್ಲಿ ಯಾವುದಾದರೂ ಕೋಮು ಗಲಭೆಗಳು ನಡೆದಿವೆಯೆ. ಕೋಮುದ್ವೇಷ ಹರಡುವಂತಹ ವ್ಯವಸ್ಥೆ ಬಿಜೆಪಿಯಲ್ಲಿ ಇದೆ. ಆದರೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ತಿಳಿಸಿದರು.
ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಪ್ರಣಾಳಿಕೆಯನ್ನು ಮಡಿಕೇರಿ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಕಾಂಗ್ರೆಸ್ ಜಿಲ್ಲಾಧಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಪ್ರಮುಖರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಮೈಸೂರು ಹಾಗೂ ಕೊಡಗು ಪಾರಂಪರಿಕ ಸ್ಥಳಗಳ ಅಭಿವೃದ್ಧಿ, ಮೈಸೂರು ಕೊಡಗು ರೈಲು ಸಂಪರ್ಕ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ವಿಮಾನ ನಿಲ್ದಾಣ, ಐಟಿ, ಬಿಟಿ ಕಂಪನಿಗಳಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಯವರಿಗೆ ಆದ್ಯತೆ, ಸಮಗ್ರ ನೀರು ಸರಬರಾಜು ವ್ಯವಸ್ಥೆ, ಪಿರಿಯಾಪಟ್ಟಣದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕೊಡಗಿನ ಪ್ರವಾಸಿ ಮಾಸ್ಟರ್ ಪ್ಲಾನ್, ಕೆರೆಗಳ ಜೀರ್ಣೋದ್ಧಾರ, ಮಡಿಕೇರಿಯಲ್ಲಿ ಟ್ರಾಮಾ ಸೆಂಟರ್, ಸೋಮವಾರಪೇಟೆಯಲ್ಲಿ ಟೆಕ್ನಾಲಜಿ ಪಾರ್ಕ್, ಮೈಸೂರಿನಲ್ಲಿ ವರ್ತುಲ ರೈಲು ಮಾರ್ಗ ಸೇರಿದಂತೆ ಎರಡು ಜಿಲ್ಲೆಗಳ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಕುರಿತು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಯದುವಂಶದ ಋಣ ತೀರಿಸುವ ಸಮಯ ಬಂದಿದೆ, ಪ್ರಚಾರಕ್ಕೆ ಹೋಗುತ್ತೇನೆ: ಎಚ್.ವಿಶ್ವನಾಥ್
ಒಟ್ಟಿನಲ್ಲಿ ಚುನಾವಣೆ ಹತ್ತಿರ ಆದಂತೆಲ್ಲಾ ಚುನಾವಣ ಕಣ ರಂಗೇರುತ್ತಿದ್ದು ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರು ಕೊಡಗಿನ ಮತದಾರರ ಸೆಳೆಯಲು ಪ್ರತ್ಯೇಕ ಪ್ರಣಾಳಿಕೆಯನ್ನು ಮಾಡಿ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಮತದಾರರು ಎಷ್ಟರ ಮಟ್ಟಿಗೆ ಇದೆಲ್ಲವನ್ನು ಸ್ವೀಕರಿಸುತ್ತಾರೋ ಕಾದು ನೋಡಬೇಕು.