ಬಿಜೆಪಿ ಸಂವಿಧಾನ ಬದಲಾಯಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ, ಇದೆಲ್ಲ ಚುನಾವಣೆ ವೇಳೆ ಕಾಂಗ್ರೆಸ್ ಸೃಷ್ಟಿಸಿದ ಅಪಪ್ರಚಾರ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಕಾಂಗ್ರೆಸ್ ಅರ್ಧ ಸತ್ಯಗಳನ್ನು ಮಂಡಿಸಿ, ಸಂವಿಧಾನದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಚಿತ್ರದುರ್ಗ (ಜ.21): ನಮ್ಮ ಸಂವಿಧಾನ ಒಂದು ಅದ್ಬುತವಾದ ಗ್ರಂಥ. ಬಿಜೆಪಿ ಯಾವತ್ತೂ ಬದಲಾಯಿಸುವ ಕುರಿತು ನಿರ್ಧಾರ ಮಾಡಿಲ್ಲ ಇದೆಲ್ಲ ಚುನಾವಣೆ ವೇಳೆ ಕಾಂಗ್ರೆಸ್ ಸೃಷ್ಟಿಸಿದ, ಅಪಪ್ರಚಾರ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ನುಡಿದರು.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಇಂದು ನಡೆದ 'ಸಂವಿಧಾನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಆಗಿತ್ತು. ಕಾಂಗ್ರೆಸ್ ಅರ್ಧ ಸತ್ಯಗಳನ್ನ ಮಂಡಿಸುವ ಮೂಲಕ ಇಲ್ಲದಿರೋ ವಿಷಯಗಳು ಒಂದು ಕಡೆ ಸೃಷ್ಟಿಯಾಗಿದ್ದವು. ಅದರಲ್ಲೊಂದು, 'ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ' ಅನ್ನೋದು. ಈ ವಿಚಾರವಾಗಿ ಚರ್ಚೆ ಆಯ್ತು. ಸದನದಲ್ಲಿ ಗದ್ದಲ ಎಬ್ಬಿಸಿದರು. ಕಾಂಗ್ರೆಸ್‌ನವರು ಸಂವಿಧಾನ ಪುಸ್ತಕ ಹಿಡಿದುಕೊಂಡು ಸಂಸತ್ ಒಳಗೆ ಬಂದರು. ಸಂವಿಧಾನ ರಕ್ಷಣೆ ಮಾಡೋರು ಅವರೇ ಎನ್ನುವ ನಿಟ್ಟಿನಲ್ಲಿ ಒಳಗೆ ಬಂದರು. ಸಂವಿಧಾನ ರಕ್ಷಣೆ ಮಾಡಲೆಂದೇ ನಾವು ಬಂದಿದ್ದೇವೆ ಎಂಬಂತೆ ಮಾತನಾಡಿದರು. ವಾಸ್ತವವಾಗಿ ಕೆಲವರು ಸಂವಿಧಾನದ ಪುಸ್ತಕದ ಮೇಲಿನ ಪ್ಲಾಸ್ಟಿಕ ಕವರ್ ಕೂಡ ತೆಗೆದಿರಲಿಲ್ಲ, ಅದು ಬೇರೆ ವಿಚಾರ ಬಿಡಿ ಎಂದು ಸಂವಿಧಾನ, ಅಂಬೇಡ್ಕರ್ ಹೆಸರಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸಂಸತ್ತಿನಲ್ಲಿ ಕಾಂಗ್ರೆಸ್‌ನವರ ವರ್ತನೆ ನೋಡಿ, ಇವರು ಯಾಕೆ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದನಿಸ್ತು. ನಮ್ಮ ಪಕ್ಷದಲ್ಲಿ ಈ ರೀತಿ ಯಾವುದೇ ನಿಲುವನ್ನು ಘೋಷಣೆ ಮಾಡಿಲ್ಲ. ಸಂವಿಧಾನ ಬದಲಿಸುವಂಥ ಯಾವುದೇ ಭಾವನೆ ವ್ಯಕ್ತಪಡಿಸಿರಲಿಲ್ಲ. ಆದರೂ ಕಾಂಗ್ರೆಸ್ ಇಂಥ ಅಪಪ್ರಚಾರವನ್ನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇತಿಹಾಸ ಅಧ್ಯಯನ ಮಾಡಿದಾಗ ಸಂವಿಧಾನ, ಅಂಬೇಡ್ಕರ್ ಯಾರಿಂದ ಅವಮಾನಕ್ಕೊಳಗಾಗಿದೆ ಎಂಬುದು ತಿಳಿಯುತ್ತದೆ. 'ಸಂವಿಧಾನ ಬದಲಾಯಿಸಿದ್ದು ಯಾರು?' ಅನ್ನೋ ಪುಸ್ತಕದಲ್ಲಿ ದಾಖಲೆ ಸಮೇತ ಮಾಹಿತಿ ಇದೆ. ಸಂವಿಧಾನ ಒಂದು ಅದ್ಭುತವಾದ ಕಾನೂನು ಗ್ರಂಥ. ನಮ್ಮ ಪಕ್ಷ ಸಂವಿಧಾನ ಬದಲಾಯಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಇದೆಲ್ಲ ಚುನಾವಣೆಯಲ್ಲಿ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಮಾಡಿದ್ದ ಅಪಪ್ರಚಾರ, ಸೃಷ್ಟಿ ಅಷ್ಟೆ ಎಂದರು.
