ಮೈಸೂರು ದಸರಾ 2021 : ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ
- ಮೈಸೂರು ದಸರಾ 2021 ಹಿನ್ನೆಲೆಯಲ್ಲಿ ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ
- ಮುಂಜಾನೆ 4.40ರಿಂದ ಅರಮನೆಯಲ್ಲಿ ಆರಂಭವಾದ ಕಾರ್ಯಕ್ರಮಗಳು
ಮೈಸೂರು(ಅ.15): ಮೈಸೂರು ದಸರಾ 2021 (Mysuru Dasara 2021) ಹಿನ್ನೆಲೆಯಲ್ಲಿ ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಮುಂಜಾನೆ 4.40ರಿಂದ ಅರಮನೆಯಲ್ಲಿ (Palace) ಹೋಮ ಆರಂಭವಾಗಿದ್ದು, ಹೋಮಕ್ಕೆ ಯದುವೀರ್ ಒಡೆಯರ್ (Yaduveer wadiyar) ಪೂರ್ಣಾಹುತಿ ನೀಡಿದ್ದಾರೆ.
5.45ಕ್ಕೆ ಆನೆ ಕುದುರೆ ಹಸುಗಳ (Cow) ಆಗಮನವಾಗಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯಗಳು ನೆರವೇರಿವೆ. ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ ನಡೆದಿದ್ದು. ಉತ್ತರ ಪೂಜೆ ನಂತರ ಶಮಿ ಪೂಜೆ. ನಂತರ ಚಾಮುಂಡಿ ದೇವಿ (Chamundeshwari) ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆಯಾಗುತ್ತದೆ. ಬಳಿಕ ದೇವಾಲಯದಿಂದ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ.
ನವದುರ್ಗೆಯರ ಅಲಂಕಾರದಲ್ಲಿ ಪುಟ್ಟ ಸುಂದರಿ..! ಇಲ್ನೋಡಿ ಫೋಟೋಸ್
7.20ರಿಂದ 7.40ರವರೆಗೆ ವಿಜಯ ಯಾತ್ರೆ ನಡೆಯಲಿದ್ದು, ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಮಾಡುವರು.
ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ (Bhuvaneshwari Temple) ಮೆರವಣಿಗೆ ನಡೆಯಲಿದ್ದು ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ (Banni Tree) ಯದುವೀರ ಒಡೆಯರ್ ಪೂಜೆ ನೆರವೇರಿಸಲಿದ್ದಾರೆ. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸಾಗಲಿದ್ದು, ಅರಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಿದ್ದಾರೆ. 8 ಗಂಟೆಗೆ ಮೈಸೂರು ಅರಮನೆ ದಸರಾ ಕಾರ್ಯಕ್ರಮ ಮುಕ್ತಾಯವಾಗಲಿವೆ.
ಜಂಬೂ ಸವಾರಿ ದಿಬ್ಬಣಕ್ಕೆ ಕ್ಷಣ ಗಣನೆ : ಮಧ್ಯರಾತ್ರಿಯಿಂದಲೇ ಜಂಬೂ ಸವಾರಿ ಆನೆಗಳಿಗೆ (Elephant) ಬಣ್ಣ ಬಳಿಯುವ ಕೆಲಸ ನಡೆದಿದ್ದು ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೆರವಣಿಗೆ ನಡೆಯಲಿದ್ದು, ಬೆಳಿಗ್ಗೆ 8.30ರಿಂದ 9 ಗಂಟೆಗೆ ಚಾಮುಂಡಿ ಬೆಟ್ಟದಿಂದ ವಿಶೇಷವಾಗಿ ಅಲಂಕಾರಗೊಂಡ ತಾಯಿಯ ಉತ್ಸವ ಮೂರ್ತಿ ಅರಮನೆಗೆ ಆಗಮಿಸಲಿದೆ.
ಮಧ್ಯಾಹ್ನ 2 ಗಂಟೆ ನಂತರ ಅಭಿಮನ್ಯು ಆನೆಗೆ ಗಾದಿ ಕಟ್ಟಿ ಅಂಬಾರಿ ಕಟ್ಟೊ ಕಾರ್ಯ ಶುರುವಾಗಲಿದೆ. ಸಂಜೆ 4 ರ ಸುಮಾರಿಗೆ ಸಿಎಂ ಹಾಗೂ ಸಂಪುಟ ಸದಸ್ಯರು ನೇರವಾಗಿ ಅರಮನೆ ಅಂಗಳಕ್ಕೆ ಬರಲಿದ್ದಾರೆ. ಅಲ್ಲದೆ ದಸರಾ ಉದ್ಘಾಟಕ ಎಸ್‌ಎಂ.ಕೃಷ್ಣ ಕೂಡ ಆಗಮಿಸಲಿದ್ದಾರೆ.
ಸಂಜೆ 4.36 ರಿಂದ 4.46 ಮೀನ ಲಗ್ನದಲ್ಲಿ ನಂದಿ ಧ್ವಜ ಪೂಜೆ. ಸಂಜೆ 5 ರಿಂದ 5.30ರ ಮೀನ ಲಗ್ನದಲ್ಲಿ ಜಂಬೂ ಸವಾರಿಗೆ (Jambu savari) ಪುಷ್ಪಾರ್ಚನೆ ನಡೆಯಲಿದೆ. ಜಂಬೂ ಸವಾರಿಯಲ್ಲಿ ಈ ಬಾರಿ 6 ಟ್ಯಾಬ್ಲೊ ಮಾತ್ರ ಭಾಗಿಯಾಗಲಿದೆ.
ಸಿಎಂ ಭೇಟಿ : ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ (basavaraj Bommai) ಆಗಮಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಹಾಗೂ ಸಂಪುಟ ಸದಸ್ಯರು ಸಂಜೆ ನಾಲ್ಕು ಗಂಟೆಗೆ ಜಂಬೂ ಸವಾರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4.30 ನಂದಿ ಧ್ವಜ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಕೊರೋನಾ (Corona) ಕಾರಣಕ್ಕೆ ಸೀಮಿತ ಸದಸ್ಯರಿಗೆ ಮೀಸಲಾದ ಜಂಬೂ ಸವಾರಿಯು ಕೇವಲ ಅರಮನೆ ಅಂಗಳದಲ್ಲಿ ನಡೆಯಲಿದೆ.
ಸಂಜೆ 5 ಗಂಟೆಯಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ 6 ಸ್ಥಬ್ದ ಚಿತ್ರಗಳು ಭಾಗಿಯಾಗಲಿವೆ. ಸ್ಥಬ್ದ ಚಿತ್ರಗಳ ಜೊತೆಗೆ ಕಲಾತಂಡಗಳು ಮೆರವಣಿಗೆಯಲ್ಲಿರಲಿದ್ದು, ಮೊದಲಿಗೆ ನೌಪತ್ ಆನೆ ಹಾಗೂ ನಿಶಾನೆ ಆನೆಗಳ ಆಗಮಿಸಲಿವೆ. ಬಳಿಕ ನಾದಸ್ವರ ವಿದ್ವಾನ್ ಆರ್.ನಾಗರಾಜು ಮತ್ತು ಹಂಪಾಪುರ ನಾಗರಾಜ್ ತಂಡದಿಂದ ನಾದಸ್ವರ. ರತ್ನಮ್ಮ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ. ಅಂಬಳೆ ಶಿವಣ್ಣ, ನಿಲಕಂಠ, ಆನಂದಕುಮಾರ್, ಹೆಚ್.ಪಿ.ರುದ್ರೇಶ್ ತಂಡದಿಂದ ವೀರಗಾಸೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ತಬ್ಧಚಿತ್ರ. ಕೆಂಪಿಸಿದ್ದನಹುಂಡಿ ಮಹದೇವು, ಚಿಕ್ಕಮರಿಯಪ್ಪ, ಕಂಸಾಳೆ ಸಿದ್ದರಾಜು, ಕೃಷ್ಣ ಜನಮನ ಅವರಿಂದ ಕಂಸಾಳೆ. ಮುಡಾದಿಂದ ನಿರ್ಮಾಣವಾಗಿರು ಬಹುಮನೆ ಗುಂಪು ವಸತಿ ಸ್ತಬ್ಧಚಿತ್ರ. ಕು.ರಮ್ಯ ಮತ್ತು ತಂಡ, ಕಿರಣ್ ಮತ್ತು ತಂಡ, ಕುಮಾರ್ ಮತ್ತು ತಂಡ, ಸ್ವಾಮಿ ನಾಯಕ ಮತ್ತು ತಂಡದಿಂದ ದೊಳ್ಳುಕುಣಿತ. ಆರೋಗ್ಯ ಇಲಾಖೆಯ ಕೊರೊನಾ ಜಾಗೃತಿ ಸ್ತಬ್ಧಚಿತ್ರ ಪ್ರದರ್ಶನ ನಡೆಯಲಿದೆ.
ಅಮೃತ ಮತ್ತು ತಂಡದಿಂದ ನಗಾರಿ. ಪಲ್ಲವಿ ಮತ್ತು ತಂಡ, ವೈ.ಬಿ.ಪ್ರಕಾಶ್ ಮತ್ತು ತಂಡದಿಂದ ಪೂಜಾ ಕುಣಿತ. ಅರಣ್ಯ ಇಲಾಖೆಯ ಪರಿಸರ ಪ್ರಾಮುಖ್ಯತೆ ಕುರಿತು ಸ್ತಬ್ಧಚಿತ್ರ. ರಾಜಶೇಖರನ್ ಮತ್ತು ತಂಡದಿಂದ ಚಿಲಿಪಿಲಿ ಬೊಂಬೆ ಕುಣಿತ. ಹೆಚ್.ಕೆ.ನಳಿನಿ ತಂಡದಿಂದ ಕೊಂಬು ಕಹಳೆ. ಶ್ರೀಧರ್ ಮತ್ತು ತಂಡ, ಗೋವಿಂದ ನಾಯಕ ತಂಡದಿಂದ ಗಾರುಡಿ ಗೊಂಬೆ ಕುಣಿತ. ಕೃಷಿ ಇಲಾಖೆಯ ಕೇಂದ್ರ ಯೋಜನೆ ಕುರಿತ ಸ್ತಬ್ಧಚಿತ್ರ.
ವಾಸುದೇವ ಬನ್ನಂಜೆ ತಂಡದಿಂದ ಚಂಡೆ ವಾದನ. ಅರಮನೆ ಮಂಡಳಿ ವತಿಯಿಂದ ಆನೆಬಂಡಿ ಸ್ತಬ್ಧಚಿತ್ರ. ಮಹಾಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಯಕ್ಷಗಾನ. 750ಕೆಜಿ ತೂಕದ ಅಂಬಾರಿ ಹೊತ್ತ ಅಭಿಮನ್ಯು ಆನೆಗೆ ಪುಷ್ಪಾರ್ಚನೆ ನಡೆಯಲಿದೆ.