Asianet Suvarna News Asianet Suvarna News

ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಈ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ಬಗ್ಗೆ ಇಂದು (ಶನಿವಾರ) ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ. 

Mysuru Dasara 2020 inauguration To Be Held On Oct 17th Morning 7 45
Author
Bengaluru, First Published Sep 12, 2020, 7:58 PM IST

ಮೈಸೂರು, (ಸೆ.12): ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್  ಅವರ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ‌ ಸಿ.ಟಿ.ರವಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಈ ಬಾರಿ ಮೈಸೂರು ದಸರಾದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿವೆ ಸಭೆಯ ತೀರ್ಮಾನಗಳು

 ಶನಿವಾರ ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲೆಯ ಶಾಸಕರು, ಪ್ರಮುಖ ಅಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದು, ಈ ಸಭೆಯಲ್ಲಿ ಹಲವು  ಪ್ರಮುಖ ನಿರ್ಣಾಯಗಳನ್ನ ಕೈಗೊಳ್ಳಲಾಗಿದೆ. ಅವು ಈ ಕೆಳಗಿನಂತಿವೆ. 

ಸಭೆಯ ಪ್ರಮುಖಾಂಶಗಳು

* ಕೋವಿಡ್  ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. 

* ಬರುವ ಅಕ್ಟೋಬರ್ 2 ರಂದು ಮಧ್ಯಾಹ್ನ 12:18 ಗಂಟೆಗೆ ದಸರಾ ಗಜಪಡೆ ಸ್ವಾಗತ ಕಾರ್ಯಕ್ರಮ ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.
* ಈ ಹಿಂದೆ ವೀರನ ಹೊಸಹಳ್ಳಿಯಲ್ಲಿ ಆಯೋಜಿಸುತ್ತಿದ್ದ ಗಜಪಯಣ ಸಮಾರಂಭ ಇರುವುದಿಲ್ಲ. ನೇರವಾಗಿ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯ ಆಗಮನವಾಗಲಿದೆ. 

* ಈ ಬಾರಿ‌ ಕೊರೊನಾ ವಾರಿಯರ್ಸ್ ಗಳಿಂದ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಐವರು ಕೊರೊನಾ ವಾರಿಯರ್ಸ್ ಗಳ ಪೈಕಿ ಒಬ್ಬರು ದಸರಾ ಉದ್ಘಾಟನೆ ಮಾಡಲಿದ್ದು, ಉಳಿದವರಿಗೆ ಸನ್ಮಾನ ಮಾಡಲಾಗುತ್ತದೆ. ಈ ಸನ್ಮಾನಿತರ ಪಟ್ಟಿಯಲ್ಲಿ ಕೋವಿಡ್ ಶವ ಸಂಸ್ಕಾರ ಮಾಡಿದ ವ್ಯಕ್ತಿಯನ್ನು ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪ‌ಬಂದಿದೆ. 

* 2020ರ ಅಕ್ಟೋಬರ್ 17 ರಂದು  ಬೆಳಿಗ್ಗೆ 7:45 ರಿಂದ 8:15 ರೊಳಗಿನ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

* ದಸರಾ ದೀಪಾಲಂಕಾರ ಪ್ರತಿ ಬಾರಿಯಂತೆಯೇ ವಿದ್ಯುತ್ ನಿಗಮದ ವತಿಯಿಂದ ಇರಲಿದ್ದು, ಆದ್ರೆ, ಇದು ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಲಿದೆ.
* ಅರಮನೆ ಆವರಣದೊಳಗೆ ನಡೆಯುವ ಜಂಬೂ ಸವಾರಿಗೆ ಎರಡು ಸಾವಿರ ಮಂದಿಗೆ ಅವಕಾಶ ಸಾಮರ್ಥ್ಯವಿದೆ.  ಆದರೆ ಎಷ್ಟು ಜನರ ಸೇರಿಸಲು ಅನುಮತಿ‌ ಸಿಗುತ್ತದೋ ನೋಡಿ, ಆಹ್ವಾನಿತರ ಸಂಖ್ಯೆಯನ್ನು ನಿರ್ಧರಿಸಲಾಗುವುದು. 

* ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪ್ರಕಾರವೇ ಮೆರವಣಿಗೆ ನಡೆಸಲಾಗುವುದು.
* ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಅಂಬಾರಿ ಹೊರುವ ಅವಕಾಶವಿಲ್ಲ.
* ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿವೆ‌.

* ನವರಾತ್ರಿಯ ಎಲ್ಲಾ ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಲಾಗುವುದು. 
* ಎಲ್ಲಾ ಕಾರ್ಯಕ್ರಮಗಳನ್ನು ಸಾಮಾಜಿಕ‌ ಜಾಲ ತಾಣದಲ್ಲಿ ನೇರ ಪ್ರಸಾರ ಮಾಡಲಾಗುವುದು.‌

ಸಭೆಯಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಎಲ್.‌ನಾಗೇಂದ್ರ, ಆರ್. ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಕೆ. ಮಹದೇವ, ಅಶ್ವಿನ್ ಕುಮಾರ್, ಹರ್ಷವರ್ಧನ್, ಮೇಯರ್ ತಸ್ನೀಂ, ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್, ಜಿಲ್ಲಾಧಿಕಾರಿ ಬಿ.ಶರತ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ‌ ಎಸ್. ರಂಗಪ್ಪ, ಯುವ ಸಬಲೀಕರಣ ಇಲಾಖೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios