ಮೈಸೂರು, (ಏ.12): ದೇಶಕ್ಕೆ ಕೊರೊನಾ ವೈರಸ್ ಸೋಂಕು ಲಗ್ಗೆಯಿಟ್ಟ ಸಂದರ್ಭದಲ್ಲಿ ಕರ್ನಾಟಕದಲ್ಲೇ ಮೊಲದ ಸಾವಾಗಿದ್ದು, ರಾಜ್ಯದ ಜನರನ್ನು ಆತಂಕಕ್ಕೆ ದೂಡಿತ್ತು. ಆದ್ರೆ, ಇದೀಗ ಕರ್ನಾಟಕದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಂತೆ ಕಾಣುತ್ತಿದೆ. ಹಾಗಾಂತ ಜನರು ಲಾಕ್‌ಡೌನ್ ನಿರ್ಲಕ್ಷ್ಯ ಮಾಡಬಾರದು.

ರಾಜ್ಯದಲ್ಲಿ ಭಾನುವಾರ ಒಂದೇ ದಿನ 11 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. 

ಕೊರೋನಾ ಆತಂಕದ ನಡುವೆ ಕರ್ನಾಟಕ ಕೊಂಚ ನಿರಾಳ..!

 ರಾಜ್ಯದಲ್ಲಿ ಲಾಕ್ ಡೌನ್ ಗೆ ಸಾರ್ವಜನಿಕರು ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಹೆ ಹೋಲಿಸಿದ್ರೆ ಕೊರೋನಾ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ. ಮೊದಲು ದೇಶದಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 11 ಸ್ಥಾನದಲ್ಲಿರುವುದು ಉತ್ತಮ ಬೆಳವಣಿಗೆಯಾಗಿದೆ.

ಜತೆಗೆ ಕೊರೋನಾ ಪೀಡಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿರುವುದು ಸಂತಸದ ಸಂಗತಿ.

ಚಿಕ್ಕಬಳ್ಳಾಪುರದಲ್ಲಿ ಐವರು ಡಿಸ್ಚಾರ್ಜ್
 ಹೌದು.. 12 ಮಂದಿ ಕೊರೋನಾ ಸೋಂಕಿತರಿದ್ದ ಚಿಕ್ಕಬಳ್ಳಾಪುರದಲ್ಲಿ ಐವರ ಆರೋಗ್ಯ ಸುಧಾರಿಸಿದೆ. ವೈರಸ್ ಸೋಂಕಿತರು ಗುಣಮುಖರಾಗಿದ್ದು ಭಾನುವಾರ ನಾಲ್ಕು ಮಂದಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸಾಲುಗಟ್ಟಿ ನಿಂತ ವೈದ್ಯರು ಚಪ್ಪಾಳೆ ತಟ್ಟುತ್ತಾ ಫಲಪುಷ್ಪವನ್ನು ನೀಡಿ ಸಂತಸದಿಂದ ಬಿಳ್ಕೊಡುಗೆ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 5 ಮಂದಿ ಡಿಸ್ಚಾರ್ಜ್; ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವಾರಿಯರ್ಸ್

ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಕೆ
ಬೆಂಗಳೂರು ಬಿಟ್ಟರೇ ನಂತರದ ಡೇಂಜರ್ ಜೋನ್‌ ಪ್ರದೇಶ ಅಂದ್ರೆ ಅದು ಮೈಸೂರು. 45 ಕೊರೋನಾ ಸೋಂಕಿತರಲ್ಲಿ 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆಯಲ್ಲಿ 45ರಿಂದ 38ಕ್ಕೆ ಇಳಿದಿದೆ ಎಂದು ಸ್ವತಃ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಖಚಿತಪಡಿಸಿದ್ದಾರೆ.

ಒಟ್ಟಾರೆ ಸೊಂಕಿತರ ಸಂಖ್ಯೆ 226ಕ್ಕೆ ಏರಿದೆ. ಇದುವರೆಗೆ  47 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.