ಮೈಸೂ​ರು​: ಎರಡನೇ ವಿವಾಹವಾಗಲು ಒಪ್ಪದ್ದಕ್ಕೆ ವಿವಾಹಿತ ಯುವಕನನ್ನು ಅಪಹರಿಸಿದ ಯುವತಿಯ ಮಾವಂದಿರು ಹಲ್ಲೆ ನಡೆಸಿದ್ದಾರೆ. ಘಟನೆ ನಡೆದು ಎರಡು ತಿಂಗಳ ಬಳಿಕ ವಿಷಯ ಬೆಳಕಿಗೆ ಬಂದಿದೆ.

ಮೈಸೂರಿನ ಕೆ.ಆರ್‌. ಮೊಹಲ್ಲಾ ನಿವಾಸಿ ಗೌಸ್‌ಪೀರ್‌ ಹಲ್ಲೆಗೊಳಗಾದ ವಿವಾಹಿತ. ಇವರ ನೆರೆಮನೆ ನಿವಾಸಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಆಕೆಯ ಮಾವಂದಿರು ದುಂಬಾಲು ಬಿದ್ದಿದ್ದರು. ಇದಕ್ಕೆ ಗೌಸ್‌ಪೀರ್‌ ನಿರಾಕರಿಸಿದ್ದ. ಆಗ ಯುವತಿಯ ಮಾವಂದಿರು ನಮ್ಮ ಹುಡುಗಿಯನ್ನು ಮದುವೆಯಾಗದಿದ್ದರೆ ನಿನ್ನ ವಿರುದ್ಧ ಗಂಧದ ಮರ ಕಳ್ಳತನದ ಕೇಸ್‌ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಗೌಸ್‌ಪೀರ್‌ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿದ್ದ. ಆಗ ಯುವತಿಯ ಮಾವಂದಿರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದರಿಂದ ಕೋಪಗೊಂಡ ಯುವತಿಯ ಮಾವಂದಿರು ಸೆ.3ರಂದು ಗೌಸ್‌ಪೀರ್‌ನನ್ನು ಅಪಹರಿಸಿ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯಲ್ಲಿನ ತೋಟದ ಮನೆಯಲ್ಲಿ ಇರಿಸಿದ್ದರು. ಕೈಕಾಲು ಕಟ್ಟಿಹಾಕಿ ಅರೆ ಬೆತ್ತಲೆಗೊಳಿಸಿ ಮನಸೋ ಇಚ್ಛೆ ಥಳಿಸಿದ್ದರು.

ಹಲ್ಲೆಗೊಂಡ ಗೌಸ್‌ಪೀರ್‌ ಎರಡು ತಿಂಗಳ ಬಳಿಕ ವರುಣಾ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದು, ಪೊಲೀಸರು ಹಲ್ಲೆ ನಡೆಸಿದ ಯುವತಿಯ ಮಾವಂದಿರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.