Asianet Suvarna News Asianet Suvarna News
breaking news image

ನನ್ನ ಮಗ ಕೊಲೆಗಾರನಲ್ಲ, ಅವನನ್ನು ಸಿಲುಕಿಸಲಾಗಿದೆ: ದರ್ಶನ್‌ ಆಪ್ತ ನಂದೀಶ್‌ ತಾಯಿ ಅಳಲು

ನಮಗೆ ತಿನ್ನುವುದಕ್ಕೂ ಗತಿ ಇಲ್ಲ, ಹೀಗಿರುವಾಗ ನಮ್ಮ ಮಗ ಕೊಲೆ ಮಾಡಿದ್ದಾನೆಂದರೆ ನಂಬಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅವನು ಕೆಟ್ಟವನಲ್ಲ. ಬೇಕೆಂತಲೇ ಸಿಲುಕಿಸಲಾಗಿದೆ ಎಂದು ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್‌ ತಾಯಿ ಭಾಗ್ಯಮ್ಮ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡರು. 

My son is not a murderer Darshan close friend Nandish mother cries gvd
Author
First Published Jun 13, 2024, 7:48 AM IST

ಮಂಡ್ಯ (ಜೂ.13): ನಮಗೆ ತಿನ್ನುವುದಕ್ಕೂ ಗತಿ ಇಲ್ಲ, ಹೀಗಿರುವಾಗ ನಮ್ಮ ಮಗ ಕೊಲೆ ಮಾಡಿದ್ದಾನೆಂದರೆ ನಂಬಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅವನು ಕೆಟ್ಟವನಲ್ಲ. ಬೇಕೆಂತಲೇ ಸಿಲುಕಿಸಲಾಗಿದೆ ಎಂದು ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್‌ ತಾಯಿ ಭಾಗ್ಯಮ್ಮ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಆರೋಪಿ ನಂದೀಶ್‌ ಮೂಲ ಮಂಡ್ಯ ತಾಲೂಕಿನ ಚಾಮಲಾಪುರದವನು. ಆತನ ತಂದೆ-ತಾಯಿ, ಅಕ್ಕ ಎಲ್ಲರೂ ಊರಿನಲ್ಲೇ ವಾಸವಿದ್ದಾರೆ. ಬೆಂಗಳೂರಿನಲ್ಲಿ ನಂದೀಶ್‌ ಕೇಬಲ್ ಕೆಲಸ ಮಾಡಿಕೊಂಡಿದ್ದನು. 

ಭಾಗ್ಯಮ್ಮ ಹೇಳುವ ಪ್ರಕಾರ, ನಂದೀಶ್ ಜೊತೆ ಭಾನುವಾರ ಸಂಜೆ ನಾವು ಮಾತನಾಡಿದ್ದು, ಬಿಟ್ಟರೆ ಆನಂತರ ಆತ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ಗಮನಿಸಿ ಸಂಬಂಧಿಕರು ನಮಗೆ ನಂದೀಶ್‌ ಬಂಧನವಾಗಿರುವ ವಿಚಾರ ತಿಳಿಯಿತು ಎಂದು ಹೇಳಿದರು. ನಾವು ಕೂಲಿ ಮಾಡಿ ಬದುಕವವರು. ಕೇಬಲ್ ಕೆಲಸ ಮಾಡಿಕೊಂಡು ಅವನು ಬೆಂಗಳೂರಲ್ಲಿದ್ದನು. ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ನಮಗೇನೂ ಗೊತ್ತಿಲ್ಲ. ನಂದೀಶ್ ಬಂಧನದಿಂದ ನಮಗೆ ಶಾಕ್‌ ಆಗಿದೆ. ನಮ್ಮ ಮನೆಗೆ ನಂದೀಶ್ ಆಧಾರವಾಗಿದ್ದನು. ನಂದೀಶ್ ಕೆಟ್ಟವನಲ್ಲ, ಅವನನ್ನು ಬೇಕೆಂತಲೇ ಸಿಲುಕಿಸಲಾಗಿದೆ ಎಂದು ದೂರಿದರು.

ನಂದೀಶ್ ಅಕ್ಕ ನಂದಿನಿ, ದರ್ಶನ್ ಮೇಲೆ ನಂದೀಶ್‌ಗೆ ಅಭಿಮಾನ ಇತ್ತು, ಆದರೆ ಪರಿಚಯ ಇದ್ದ ಬಗ್ಗೆ ನಮಗೆ ಗೊತ್ತಿಲ್ಲ. ದರ್ಶನ್ ಜೊತೆ ಇದ್ದ ತಕ್ಷಣ ಅವರೇ ಕೊಲೆ ಮಾಡಿದ್ದಾರೆ ಎನ್ನಲಾಗುವುದಿಲ್ಲ. ಕೊಲೆ ಮಾಡಿದ್ದಾನೆಂದು ಆಧಾರ ಸಹಿತ ದೃಢವಾದ ಮೇಲೆ ಯೋಚನೆ ಮಾಡುತ್ತೇವೆ. ಅಲ್ಲಿವರೆಗೂ ನನ್ನ ತಮ್ಮನನ್ನು ಬಿಟ್ಟುಕೊಡುವುದಿಲ್ಲ. ಸತ್ತವನ ಕುಟುಂಬ ಹೇಗೆ ಬೀದಿಗೆ ಬಂದಿದ್ಯೋ ಹಾಗೇ ನಮ್ಮ ಕುಟುಂಬವೂ ಬೀದಿಗೆ ಬಂದಿದೆ. ನಾವು ಯಾರ ಬಳಿ ಹೇಳಿಕೊಳ್ಳೋಣ. ಅವರಿಗೂ ನೋವಾಗಿದ್ದರೆ ನಮಗೂ ನೋವಾಗಿದೆ ಅಷ್ಟೇ. ಅಭಿಮಾನ ಸಿನಿಮಾಗೆ ಸೀಮಿತವಾಗಿದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೊಡೆದು ಕೊಂದ ದರ್ಶನ್‌ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್‌

ಕೊಲೆ ಪ್ರಕರಣ ದರ್ಶನ್ ಹೆಸರು ಬಾಯಿಬಿಟ್ಟಿದ್ದೇ ನಂದೀಶ್: ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರ ವೇಳೆ ನಂದೀಶ್‌ ನಟ ದರ್ಶನ್‌ ಜೊತೆ ಇದ್ದನೆಂದು ಹೇಳಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ದಿನ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ದರ್ಶನ್‌ ಪ್ರಚಾರ ಮಾಡಿದ್ದರು. ಆ ವೇಳೆ ಬೌನ್ಸರ್ ಆಗಿ ನಂದೀಶ್‌ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದ ಆರೋಪಿ ನಂದೀಶ್‌, ಸದ್ಯ ರೇಣುಕಾಸ್ವಾಮಿ ಕೊಲೆಯಲ್ಲಿ ಎ-5 ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಬಾಯಿಬಿಟ್ಟಿದ್ದೇ ನಂದೀಶ್. ಕೊಲೆ ಪ್ರಕರಣ ಪತ್ತೆಯಾದ ಬಳಿಕ ಪೊಲೀಸರೆದುರು ಶರಣಾಗತರಾದ ಮೂವರ ಪೈಕಿ ನಂದೀಶ್ ಕೂಡ ಒಬ್ಬನಾಗಿದ್ದಾನೆ.

Latest Videos
Follow Us:
Download App:
  • android
  • ios