Asianet Suvarna News Asianet Suvarna News

ಶಾಸಕರು, ಸಂಸದರ ‘ಖಾಸಗಿ ನಂಬರ್‌ ಪ್ಲೇಟ್‌’ ನಿಷೇಧ!

ಶಾಸಕರು, ಸಂಸದರ ‘ಖಾಸಗಿ ನಂಬರ್‌ ಪ್ಲೇಟ್‌’ ನಿಷೇಧ| ಜನಪ್ರತಿನಿಧಿಗಳು ಖಾಸಗಿ ವಾಹನದ ಮೇಲೆ ಸರ್ಕಾರಿ ಲಾಂಛನ, ಚಿಹ್ನೆ, ಹುದ್ದೆಯ ಹೆಸರು ಬರೆಯುವಂತಿಲ್ಲ: ಹೈಕೋರ್ಟ್‌| ಗ್ರಾಪಂ ಸದಸ್ಯರಿಂದ ಹಿಡಿದು ಲೋಕಸಭೆ ಸದಸ್ಯರವರೆಗೂ ಆದೇಶ ಅನ್ವಯ

MP and MLAs Are Restricted To Use Govt Emblem Designation In Their Private Vehicle
Author
Bangalore, First Published Jan 4, 2020, 8:14 AM IST

ಬೆಂಗಳೂರು[ಜ.04]: ಗ್ರಾಮ ಪಂಚಾಯತಿ ಸದಸ್ಯರಿಂದ ಲೋಕಸಭೆ ಸದಸ್ಯರವರೆಗೂ ಎಲ್ಲಾ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನಗಳ ನಾಮಫಲಕದ ಮೇಲೆ ವಾಹನದ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ತಮ್ಮ ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆಯನ್ನು ಒಳಗೊಂಡಂತೆ ಯಾವುದೇ ರೀತಿಯ ಬರಹಗಳನ್ನು ಬರೆಯಬಾರದು ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಈ ಕುರಿತಂತೆ ಆನಂದ್‌ ಶೆಟ್ಟಿಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ನ್ಯಾಯಪೀಠ ಶುಕ್ರವಾರ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಯ ಹಾಲಿ-ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ನೋಂದಣಿ ಸಂಖ್ಯೆ ಹೊರತುಪಡಿಸಿ, ಹೆಸರು, ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳನ್ನು ನಮೂದಿಸಬಾರದು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು, ಅರೆನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ-ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಖಾಸಗಿ ಸಂಘಟನೆ, ಸಂಘ-ಸಂಸ್ಥೆ, ಕಂಪನಿಗಳ ವಾಹನಗಳ ಮೇಲೆಯೂ ಅಳವಡಿಸಬಾರದು. ಈ ನಿಯಮ ಉಲ್ಲಂಘಿಸಿದ ವಾಹನಗಳ ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಂತಹ ಫಲಕಗಳನ್ನು ತೆರವುಗೊಳಿಸಿ ಜ.22ರಂದು ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಕೇಂದ್ರ ಮೋಟಾರು ನಿಯಮದ ಪ್ರಕಾರ ಸರ್ಕಾರಿ ವಾಹನಗಳ ನೋಂದಣಿ ಫಲಕದಲ್ಲಿ ಮಾತ್ರ ಸರ್ಕಾರಿ ಲಾಂಛನ ಬಳಸಲು ಅವಕಾಶವಿದೆ. ಖಾಸಗಿ ಸಂಸ್ಥೆಯ ವಾಹನಗಳ ನೋಂದಣಿ ಫಲಕ, ಗಾಜಿನ ಮೇಲೆ ಸಂಘದ ಹೆಸರು, ಪದನಾಮ ಬಳಸುವಂತಿಲ್ಲ. ಈ ನಿಯಮವನ್ನು ಜನಪ್ರತಿನಿಧಿಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳ ವ್ಯಕ್ತಿಗಳು ಉಲ್ಲಂಘಿಸಿ, ಸರ್ಕಾರ ಮತ್ತದರ ಸಂಸ್ಥೆಗಳ ಲಾಂಛನ, ಚಿಹ್ನೆ ಮತ್ತು ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಕಾನೂನುಬಾಹಿರ ಎಂದು ಹೈಕೋರ್ಟ್‌ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರಸನ್ನ ದೇಶÜಪಾಂಡೆ, ಈ ಪ್ರಕರಣದಲ್ಲಿ ಡಿ.11 ಮತ್ತು 18ರಂದು ಹೈಕೋರ್ಟ್‌ ನೀಡಿದ ಆದೇಶದ ಅನುಸಾರ ರಾಜ್ಯ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಸರ್ಕಾರಿ ಹಾಗೂ ನ್ಯಾಯಿಕ ಸಂಸ್ಥೆಗಳ ಲಾಂಛನ, ಹೆಸರುಗಳನ್ನು ಬಳಸುವುದು ಕಾನೂನು ಬಾಹಿರವೆಂದು ತಿಳಿಸಲು ರಾಜ್ಯದ ಎಲ್ಲಾ ಪೊಲೀಸ್‌ ಅಧೀಕ್ಷಕರು, ನಗರ ಪೊಲೀಸ್‌ ಆಯುಕ್ತರು ತಮ್ಮ ಘಟಕಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ಹಮ್ಮಿಕೊಂಡಿದ್ದರು. ಸಾರ್ವಜನಿಕರಿಗೆ ಕರಪತ್ರ ವಿತರಿಸಿದ್ದು, ಬ್ಯಾಂಕು, ಪೆಟ್ರೋಲ್‌ ಬಂಕ್‌, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ಅರಿವು ಮೂಡಿಸಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆ ಆಯುಕ್ತರು ಪ್ರಮಾಣಪತ್ರ ಸಲ್ಲಿಸಿ, ಲಾಂಛನ ಮತ್ತು ಹೆಸರುಗಳ (ದುರ್ಬಳಕೆ ನಿಯಂತ್ರಣ) ಕಾಯ್ದೆ-1950ರ ನಿಯಮಗಳ ಬಗ್ಗೆ ಮಾಹಿತಿ ನೀಡಿ 2019ರ ಡಿ.21ರಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಅಲ್ಲದೆ, 2019ರ ಡಿ.28ರಿಂದ 31ರವರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಆ ವೇಳೆ ಒಟ್ಟು 10,079 ವಾಹನಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಅನಧಿಕೃತವಾಗಿ ಸರ್ಕಾರದ ಲಾಂಛನ, ಚಿಹ್ನೆ, ಸಂಘ, ಸಂಸ್ಥೆಗಳ ಹೆಸರು ಪ್ರದರ್ಶಿಸಿಕೊಂಡು ಓಡಾಡುತ್ತಿದ್ದಂತಹ 841 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 4,89,400 ರು. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಮೋಟಾರು ವಾಹನ ಕಾಯ್ದೆ ಪ್ರಕಾರ ಸರ್ಕಾರಿ ವಾಹನಗಳ ಮೇಲೆ ಮಾತ್ರ ಸರ್ಕಾರಿ ಲಾಂಛನ, ಚಿಹ್ನೆ ಹಾಗೂ ಪದನಾಮ ಹಾಕಿಕೊಳ್ಳಲು ಅವಕಾಶವಿದೆ. ಜನಪ್ರತಿನಿಧಿಗಳು, ಖಾಸಗಿ ಸಂಘಟನೆ-ಸಂಸ್ಥೆಗಳು ಖಾಸಗಿ ವಾಹನಗಳ ಮೇಲೆ ಸರ್ಕಾರಿ ಲಾಂಛನ, ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಈ ಸಂಬಂಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಸರ್ಕಾರದ ಈ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣದಲ್ಲಿ ಸರ್ಕಾರ ಮತ್ತಷ್ಟುಪರಿಣಾಮಕಾರಿಯಾಗಿ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Follow Us:
Download App:
  • android
  • ios