ಪ್ರವಾಹ ಪೀಡಿತ ಪ್ರದೇಶದಲ್ಲಿ ‘ಸೊಳ್ಳೆ’ ಸವಾಲು! -ಮಹದೇವಪುರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಇಳಿದ ನೀರಿನ ಪ್ರವಾಹ ಮನೆಗಳತ್ತ ಹೊರಟ ನಿವಾಸಿಗಳು -ಕೊಳಚೆ ನೀರಿನಿಂದಾಗಿ ಹೆಚ್ಚಿದ ಸೊಳ್ಳೆಗಳ ಕಾಟ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲು ಬಿಬಿಎಂಪಿ ಕಾರ್ಯಾಚರಣೆ

ಬೆಂಗಳೂರು (ಸೆ.10) : ಹದೇವಪುರ ವಲಯ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ನಲುಗಿದ್ದ ರೈನ್‌ಬೋ ಡ್ರೈವ್‌ ಲೇಔಟ್‌, ದಿ ಕಂಟ್ರಿ ಸೈಡ್‌ ಲೇಔಟ್‌ ಸೇರಿದಂತೆ ಹಲವು ಲೇಔಟ್‌ಗಳು, ಅಪಾರ್ಚ್‌ಮೆಂಟ್‌ಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಕಳೆದೊಂದು ವಾರದಿಂದ ನೀರು ತುಂಬಿದ್ದ ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲಿ ಮನೆ ಖಾಲಿ ಮಾಡಿ ಬೇರೆ ಕಡೆ ತೆರಳಿದ್ದ ನಿವಾಸಿಗಳು ಮತ್ತೆ ಮನೆಗಳ ಕಡೆಗೆ ಬರಲು ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಹೊತ್ತಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಲೇಔಟ್‌ನಿಂದ ಹೊರಗೆ ಹರಿಯುತ್ತಿದ್ದು ರಾತ್ರಿ ಸಂಪೂರ್ಣ ಖಾಲಿಯಾಗಿತ್ತು. ಇಡೀ ಬಡಾವಣೆ ಜಲಾವೃತ್ತಗೊಂಡಿದ್ದರಿಂದ ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

Mosquito Diseases : ಈ ಸೀಸನ್‌ನಲ್ಲಿ ಈ ರೋಗಗಳ ಬಗ್ಗೆ ಎಚ್ಚರವಾಗಿರಿ !

ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ದಿ ಕಂಟ್ರಿಸೈಡ್‌ ಲೇಔಟ್‌ನ ಪ್ರವಾಹ ಪರಿಸ್ಥಿತಿ ತಹಬದಿಗೆ ಬಂದಿದೆ. ಇಲ್ಲೂ ಕೂಡ ನೀರಿನ ಮಟ್ಟಇಳಿಕೆಯಾಗಿದೆ. ಶನಿವಾರ ಮನೆ, ರಸ್ತೆಗಳಲ್ಲಿ ತುಂಬಿಕೊಂಡಿದ್ದ ಕೆಸರನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ನಂತರ ಬ್ಲಿಚಿಂಗ್‌ ಪೌಡರ್‌ ಸಿಂಪಡಣೆ ಮಾಡುತ್ತೇವೆ. ಮನೆಗಳಿಗೆ ಟ್ರ್ಯಾಕ್ಟರ್‌ ಮೂಲಕ ಕುಡಿಯುವ ನೀರು ಸರಬರಾಜಿಗೆ ಕ್ರಮವಹಿಸಿದ್ದೇವೆ ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ್‌ ಕಬಾಡೆ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಯಮಲೂರಿನ ಎಪ್ಸಿಲಾನ್‌ ಲೇಔಟ್‌, ಬೆಳ್ಳತ್ತೂರು ಕೀರ್ತಿ ಹೈಟ್ಸ್‌ ಅಪಾರ್ಚ್‌ಮೆಂಟ್‌, ದಿವ್ಯಶ್ರೀ ಅಪಾರ್ಚ್‌ಮೆಂಟ್‌, ಯಮಲೂರಿನ ಕೋಡಿ ಸಮೀಪದ ವಿಲ್ಲಾಗಳು, ಮುನೇನಕೊಳಲು ಅಪಾರ್ಚ್‌ಮೆಂಟ್‌ ಸೇರಿದಂತೆ ಏಳೆಂಟು ಅಪಾರ್ಚ್‌ಮೆಂಟ್‌ಗಳು, ಒಂದೆರಡು ಲೇಔಟ್‌ಗಳಲ್ಲಿ ಸ್ವಲ್ಪ ನೀರು ಹಾಗೆಯೇ ಇದೆ. ಅದನ್ನು ಶನಿವಾರ ಸಂಜೆಯೊಳಗೆ ಖಾಲಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಆರಂಭಿಸಿದ್ದಾರೆ. ಹೀಗೆ ಎರಡ್ಮೂರು ದಿನಗಳಲ್ಲಿ ಪ್ರವಾಹದಿಂದ ಆಗಿರುವ ತೊಂದರೆಯನ್ನು ಸರಿಪಡಿಸಲಿದ್ದೇವೆ. ಆ ನಂತರ ಮೂಲಸೌಲಭ್ಯಗಳಿಗೆ ಆಗಿರುವ ಹಾನಿಯನ್ನು ಪರಿಶೀಲಿಸಿ ವರದಿ ಸಿದ್ದಪಡಿಸುತ್ತೇವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ವಾಹನ ಸಂಚಾರ ಸುಗಮ

ಮಹದೇವಪುರ ವಲಯ ವ್ಯಾಪ್ತಿಯಲ್ಲಿಪ್ರಮುಖ ಮತ್ತು ವಾರ್ಡ್‌ ರಸ್ತೆಗಳನ್ನು ಸೇರಿ ಒಟ್ಟಾರೆ 27 ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಇವುಗಳಲ್ಲಿ 17 ರಸ್ತೆಗಳಲ್ಲಿ ಹೆಚ್ಚುವರಿ ನೀರು ತುಂಬಿತ್ತು. ಇನ್ನುಳಿದ 10 ರಸ್ತೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು ಬಹುತೇಕ ರಸ್ತೆಗಳ ನೀರು ಇಳಿಕೆಯಾಗಿದೆ. ವಾಹನ ಸಂಚಾರ ಸುಗಮಗೊಳ್ಳುತ್ತಿದೆ.

ಮಹದೇವಪುರದಲ್ಲಿ ಹೆಚ್ಚಿನ ಹಾನಿ

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ಹೆಚ್ಚಿನ ಅನಾಹುತ ಸೃಷ್ಟಿಯಾಗಿತ್ತು. ಅಲ್ಲಿ ವಾಸವಿದ್ದ 5 ಸಾವಿರಕ್ಕೂ ಹೆಚ್ಚಿನ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಅದರ ಜತೆಗೆ 27 ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಪ್ರವಾಹದಿಂದಾಗಿ ರಸ್ತೆ, ಚರಂಡಿಗಳಿಗೂ ಹಾನಿಯಾಗಿದೆ. ಅದರ ಜತೆಗೆ ಪ್ರವಾಹಕ್ಕೆ ತುತ್ತಾದ ಮನೆಗಳಿಗೆ ಪರಿಹಾರ ನೀಡಬೇಕಿದೆ. ಅದಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಪ್ರವಾಹಕ್ಕೆ ತುತ್ತಾದ ಮನೆಗಳ ಲೆಕ್ಕದಲ್ಲಿ ತೊಡಗಿದ್ದಾರೆ.

ಮಹದೇವಪುರ, ಪೂರ್ವ ವಲಯ ವ್ಯಾಪ್ತಿಯಲ್ಲಿ ಬಹುತೇಕ ಕಡೆ ರಸ್ತೆಗಳು ಹಾನಿಯಾಗಿವೆ. ಕೆಲವೆಡೆ ಸಂಪೂರ್ಣ ಡಾಂಬಾರು ಕಿತ್ತು ಬಂದಿದ್ದು, ಹೊಸದಾಗಿಯೇ ರಸ್ತೆ ನಿರ್ಮಾಣ ಮಾಡಬೇಕಿದೆ. ಅಲ್ಲದೆ, ಸ್ಮಾರ್ಚ್‌ಸಿಟಿ ಅಡಿಯಲ್ಲಿ ಮಾಡಲಾದ ಕಾಮಗಾರಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಹಾನಿಗೊಳಗಾದ ರಸ್ತೆ, ಪಾದಚಾರಿ ಮಾರ್ಗ, ಚರಂಡಿಗಳ ದುರಸ್ತಿಗೆ .15 ಕೋಟಿಗೂ ಹೆಚ್ಚಿನ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

3 ಸಾವಿರ ಕುಟುಂಬಕ್ಕೆ.3 ಕೋಟಿ ಪರಿಹಾರ

ಒಂದು ಅಂದಾಜಿನ ಪ್ರಕಾರ 3 ಸಾವಿರಕ್ಕೂ ಹೆಚ್ಚಿನ ಮನೆಗಳು ಪ್ರವಾಹಕ್ಕೆ ಸಿಲುಕಿ, ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಅಂತಹ ಮನೆಗಳಿಗೆ ತಲಾ .10 ಸಾವಿರ ಪರಿಹಾರ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಪರಿಹಾರ ಮೊತ್ತ .3 ಕೋಟಿ ದಾಟಲಿದೆ. ಸೊಳ್ಳೆ ಎಲ್ಲರಿಗಿಂತ ಹೆಚ್ಚು ನಿಮ್ಗೇ ಕಚ್ತಿದ್ಯಾ ? ಕಾರಣವೇನು ತಿಳ್ಕೊಳ್ಳಿ

ಸಾಂಕ್ರಾಮಿಕ ರೋಗದ ಬಗ್ಗೆ ಜನರಿಗೆ ಜಾಗೃತಿ:

ಪ್ರವಾಹ ಪೀಡಿತ ಬಡಾವಣೆಗಳಲ್ಲಿ ಇದೀಗ ಸೊಳ್ಳೆ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹೀಗಾಗಿ ಬಿಬಿಎಂಪಿಯು ನಿವಾರಕ ಸಿಂಪಡಣೆ ಕಾರ್ಯ ಆರಂಭಿಸಿದೆ. ಈ ಕಾರ್ಯಕ್ಕಾಗಿ ಹಿರಿಯ ಆರೋಗ್ಯ ಪರಿವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರವಾಹ ಪೀಡಿತ ಸ್ಥಳದಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಡೇಂಘಿ ಸೇರಿದಂತೆ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸೂಚಿಸಲಾಗಿದೆ. ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಹೆಲ್ತ್‌ ಕಿಯೋಸ್‌್ಕ ಸ್ಥಾಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಯೋಜನೆ ಮಾಡಲಾಗಿದೆ. ಜತೆಗೆ ಮುಂದಿನ ಎರಡು ದಿನದಲ್ಲಿ ಆರೋಗ್ಯ ಶಿಬಿರ ನಡೆಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಮಹದೇವಪುರ ವಲಯದ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.