* ರಾಜ್ಯದ 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ* ಶುಕ್ರವಾರದವರೆಗೂ ವರುಣನ ಆರ್ಭಟ ಮುಂದುವರಿಯಲಿದೆ* ಮುಂಗಾರು ತೀವ್ರ
ಬೆಂಗಳೂರು(ಜು.07): ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೊತೆಗೆ ರಾಜ್ಯದ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಶುಕ್ರವಾರದವರೆಗೂ ವರುಣನ ಆರ್ಭಟ ಮುಂದುವರಿಯಲಿದೆ. ಉಳಿದಂತೆ ಒಳನಾಡಿನ ಜಿಲ್ಲೆಗಳಲ್ಲೂ ಮುಂಗಾರು ಚುರುಕಾಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಮುಂಗಾರು ತೀವ್ರ:
ಕಳೆದ ಕೆಲ ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳನ್ನು ಕೇಂದ್ರಿಕರಿಸಿದ್ದ ಮುಂಗಾರು ಇದೀಗ ರಾಜ್ಯಾದ್ಯಂತ ವಿಸ್ತರಣೆಗೊಂಡಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಶೇ.73 ಗ್ರಾಮ ಪಂಚಾಯತ್‌ಗಳ ಮಳೆ ಮಾಪನ ಕೇಂದ್ರಗಳಲ್ಲಿ ಕಾಲು ಸೆಂ.ಮೀಗಿಂತ ಹೆಚ್ಚು ಮಳೆ ದಾಖಲಾಗಿದೆ. ರಾಜ್ಯದ 25 ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ರಾಜ್ಯದ ಹಲವೆಡೆ ವರುಣನ ಅರ್ಭಟ: ಚಿತ್ರದುರ್ಗದಲ್ಲಿ ಮಳೆಯಿಲ್ಲದೇ ಅನ್ನದಾತ ಕಂಗಾಲು..!
ಉತ್ತರ ಕನ್ನಡದ ಕೊಡ್ಕಣಿ, ಶಿವಮೊಗ್ಗದ ಬಾರಗದ್ದೆಯಲ್ಲಿ ತಲಾ 22.75 ಸೆಂ.ಮೀ, ಚಿಕ್ಕಮಗಳೂರಿನ ಮರಸಣಿಗೆ 22.2, ಉತ್ತರ ಕನ್ನಡದ ಬೆಳಸೆ 21.9, ಬೆಳಗಾವಿಯ ಕಣಕಂಬಿ 21.2, ಉಡುಪಿಯ ಕುಚ್ಚೂರು 19.8, ದಕ್ಷಿಣ ಕನ್ನಡದ ಮೇಲಂತಬೆಟ್ಟಿನಲ್ಲಿ 19.4 ಸೆಂ.ಮೀ ಮಳೆ ದಾಖಲಾಗಿದೆ.
ಮುನ್ನೆಚ್ಚರಿಕೆ
ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುರುವಾರ ‘ಅತಿ ಭಾರಿ’ ಮಳೆಯಾಗಲಿದ್ದು ಆರೆಂಜ್ ಅಲರ್ಚ್ (11.56 ಸೆಂ.ಮೀ - 20.44 ಸೆಂ.ಮೀ) ನೀಡಲಾಗಿದೆ. ಮಲೆನಾಡಿನ ಹಾಸನ ಮತ್ತು ಉತ್ತರ ಒಳನಾಡಿನ ಹಾವೇರಿ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗೆ ಭಾರಿ ಮಳೆಯ ಯೆಲ್ಲೋ ಅಲರ್ಚ್ (6.45 ಸೆಂ.ಮೀ - 11.55 ಸೆಂ.ಮೀ) ನೀಡಲಾಗಿದೆ.
ಶುಕ್ರವಾರ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು ಮಲೆನಾಡಿನ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
