* 3ನೇ ಅಲೆ ಅಲ್ಲ, ಮಕ್ಕಳಿಗೆ ಈಗಲೇ ಕೊರೋನಾ ಡೇಂಜರ್‌!* ರಾಜ್ಯದಲ್ಲಿ ಕಳೆದ ಒಂದೇ ತಿಂಗಳಿನಲ್ಲಿ 40 ಸಾವಿರ ಚಿಣ್ಣರಿಗೆ ಸೋಂಕು* 30 ದಿನದಲ್ಲಿ ಸೋಂಕು 18 ಪಟ್ಟು ಏರಿಕೆ* ಪ್ರತಿ 2 ದಿನಕ್ಕೊಂದು ಮಗು ಸಾವು* 2ನೇ ಅಲೆಯಲ್ಲಿ 0-9 ವಯಸ್ಸಿನ ಮಕ್ಕಳು ಕೋವಿಡ್‌ ಹೊಡೆತದಿಂದ ತತ್ತರ

ಬೆಂಗಳೂರು(ಮೇ.23): ಕೊರೋನಾ ಮೂರನೇ ಅಲೆ ಮಕ್ಕಳ ಪಾಲಿಗೆ ಮಾರಕವಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದಾರೆ. ಆದರೆ, ಕೊರೋನಾದ ಎರಡನೇ ಅಲೆಯೇ ಮಕ್ಕಳ ಪಾಲಿಗೆ ಕಂಟಕವಾಗಿದೆ ಎಂಬುದನ್ನು ಅಂಕಿ-ಅಂಶ ನಿರೂಪಿಸುತ್ತಿದೆ. ಎರಡನೇ ಅಲೆಯ ವೇಳೆ ಕೇವಲ ಒಂದು ತಿಂಗಳಲ್ಲಿ ನಿತ್ಯ ಸರಾಸರಿ ಸಾವಿರ ಪ್ರಕರಣಗಳಂತೆ ಅಜಮಾಸು 40 ಸಾವಿರ ಮಕ್ಕಳು ಸೋಂಕಿತರಾಗಿದ್ದಾರೆ. ಸಮಾಧಾನದ ಅಂಶ ಎಂದರೆ, ಮಕ್ಕಳಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ರಾಜ್ಯದಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ ದೃಢಪಟ್ಟ407 ದಿನಗಳಲ್ಲಿ (ಮೊದಲ ಅಲೆ ಅವಧಿ) ಕೇವಲ 29 ಸಾವಿರ ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದರೆ, ಕಳೆದ 30 ದಿನದಲ್ಲಿ (ಎರಡನೇ ಅಲೆ ಅವಧಿ) 40 ಸಾವಿರಕ್ಕೂ ಹೆಚ್ಚು ಮಕ್ಕಳು ಸೋಂಕಿನಿಂದ ಬಾಧಿತರಾಗಿದ್ದಾರೆ. ಅಂದರೆ, ಎರಡೂ ಅಲೆಯ ವೇಳೆಯ ಮಕ್ಕಳ ಒಟ್ಟು ಸೋಂಕಿನ ಪೈಕಿ ಶೇ. 58ರಷ್ಟುಪ್ರಕರಣಗಳು ಕಳೆದ ಒಂದು ತಿಂಗಳಲ್ಲಿ ದಾಖಲಾಗಿವೆ.

ಇದು ಸ್ಪಷ್ಟವಾಗಿ ಮೂರನೇ ಅಲೆಗೂ ಮುನ್ನವೇ ಕೊರೋನಾ ಮಕ್ಕಳನ್ನು ಬಾಧಿಸತೊಡಗಿದೆ ಎಂಬುದನ್ನು ನಿರೂಪಿಸುತ್ತದೆ. ಜತೆಗೆ ಹದಿಹರೆಯದವರಿಗೆ ಎರಡನೇ ಅಲೆ ಭಾರಿ ಹೊಡೆತ ನೀಡಿದೆ ಎಂಬುದು ಅಂಕಿ-ಅಂಶದಿಂದ ತಿಳಿದುಬರುತ್ತಿದೆ.

ಸರಾಸರಿ 1300 ಪ್ರಕರಣ:

ರಾಜ್ಯದಲ್ಲಿ ಏಪ್ರಿಲ್‌ 20ರಿಂದ ಮೇ 20ರ ಅವಧಿಯಲ್ಲಿ 9 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿದಿನ ಸರಾಸರಿ 1,300 ಪ್ರಕರಣದಂತೆ ಒಟ್ಟು 38,994 ಮಂದಿಗೆ ಸೋಂಕು ಪತ್ತೆಯಾಗಿದೆ. ಹಾಗೆಯೇ ಹದಿಹರೆಯದ ಮಕ್ಕಳಲ್ಲಿ ಈ ಅವಧಿಯಲ್ಲಿ 99,940 ಪ್ರಕರಣ ಕಂಡು ಬಂದಿದ್ದು, ಪ್ರತಿದಿನ ಸರಾಸರಿ 3,331 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೇ 20ರ ಹೊತ್ತಿಗೆ ರಾಜ್ಯದಲ್ಲಿ ಒಟ್ಟು 23.35 ಲಕ್ಷ ಮಂದಿಯಲ್ಲಿ ಸೋಂಕು ಕಂಡುಬಂದಿದ್ದು ಇದರಲ್ಲಿ 9 ವರ್ಷದೊಳಗಿನ 68,635 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ ಒಟ್ಟು 1.73 ಲಕ್ಷ ಮಂದಿ ಇದ್ದಾರೆ. 9 ವರ್ಷದೊಳಗಿನ 43 ಮಂದಿ, ಮತ್ತು 10 ರಿಂದ 19 ವರ್ಷದೊಳಗಿನ 63 ಮಂದಿ ಮೃತರಾಗಿದ್ದಾರೆ.

ಸೋಂಕು 18 ಪಟ್ಟು ಏರಿಕೆ:

ಆದರೆ, ಕಳೆದ ಒಂದು ತಿಂಗಳಲ್ಲಿ ಈ ವಯೋವರ್ಗದವರಲ್ಲಿ ಬಿರುಗಾಳಿ ವೇಗದಲ್ಲಿ ಸೋಂಕು ಹಬ್ಬುತ್ತಿದೆ. ರಾಜ್ಯಕ್ಕೆ ಕೋವಿಡ್‌ ಸೋಂಕು ದೃಢಪಟ್ಟ2020ರ ಮಾಚ್‌ರ್‍ 8ರಿಂದ 2021ರ ಏಪ್ರಿಲ್‌ 19ರವರೆಗೆ ಒಟ್ಟು 29,641 ಮಂದಿ 9 ವರ್ಷದೊಳಗಿನವರು ಮತ್ತು 10 ರಿಂದ 19 ವರ್ಷದೊಳಗಿನ 73,846 ಮಂದಿ ಕೋವಿಡ್‌ ಸೋಂಕಿತರಾಗಿದ್ದಾರೆ. ಅಂದರೆ ಈ 407 ದಿನಗಳ ಅವಧಿಯಲ್ಲಿ ಪ್ರತಿದಿನದ ಸರಾಸರಿಯಂತೆ 73 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಹದಿಹರೆಯದವರಲ್ಲಿ ಪ್ರತಿದಿನದ ಸರಾಸರಿ 181 ಮಂದಿಯಂತೆ ಸೋಂಕು ದಾಖಲಾಗಿತ್ತು. ಅಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ರಾಜ್ಯಕ್ಕೆ ಸೋಂಕು ಕಾಲಿಟ್ಟಆರಂಭದ 407 ದಿನಗಳಿಗೆ ಹೋಲಿಸಿದರೆ ಆ ಬಳಿಕದ 30 ದಿನಗಳಲ್ಲಿ ಸೋಂಕಿನ ಪ್ರಮಾಣದಲ್ಲಿ 18 ಪಟ್ಟು ಏರಿಕೆಯಾಗಿದೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಏಪ್ರಿಲ್‌ 19ರವರೆಗೆ 29 ಮಂದಿ ಮಕ್ಕಳು ಕೋವಿಡ್‌ ಕಾರಣದಿಂದ ಮರಣ ಹೊಂದಿದ್ದರೆ, ಆ ಬಳಿಕದ ಅವಧಿಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ. ಅಂದರೆ ಕಳೆದ ಒಂದು ತಿಂಗಳಲ್ಲಿ ಹೆಚ್ಚುಕಮ್ಮಿ ಎರಡು ದಿನಕ್ಕೆ ಒಂದರಂತೆ ಮಕ್ಕಳ ಮರಣವಾಗಿದೆ. ಅದೇ ರೀತಿ ಹದಿಹರೆಯದವರಲ್ಲಿ ಏ. 19ರವರೆಗೆ 46 ಮಂದಿ ಮೃತರಾಗಿದ್ದರೆ ಆ ಬಳಿಕ 17 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮಕ್ಕಳ ಮರಣ ದರ ಶೇ. 0.035 ಇದ್ದು ಏಪ್ರಿಲ್‌ 19ರವರೆಗೆ ಮರಣ ದರ ಶೇ.0.097 ಇತ್ತು. ಮಕ್ಕಳ ಮರಣ ಪ್ರಮಾಣದಲ್ಲಿ ತುಸು ಏರಿಕೆ ದಾಖಲಾಗಿದೆ. ಆದರೆ 10 ರಿಂದ 19 ವರ್ಷದೊಳಗಿನವರಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇ. 0.062 ಮಂದಿ ಸಾವನ್ನಪ್ಪಿದ್ದು ಏ.19ಕ್ಕೆ ಮುಂಚಿತವಾಗಿ ಶೇ.0.017ರ ಮರಣ ದರ ದಾಖಲಾಗಿದೆ. ಈ ವಯೋಮಾನದವರಲ್ಲಿ ಸಾವಿನ ದರದಲ್ಲಿ ತುಸು ಇಳಿಕೆ ದಾಖಲಾಗಿದೆ.

ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿರುವುದೇಕೆ?

ಕೋವಿಡ್‌ ಸೋಂಕಿತರಲ್ಲಿ ಬಹುತೇಕರು ಹೋಮ್‌ ಐಸೋಲೇಷನ್‌ನಲ್ಲಿ ಇದ್ದಾರೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಮಕ್ಕಳು ಬರುವುದರಿಂದ ಸೋಂಕು ಹೆಚ್ಚಳವಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವವರು ಐಸೋಲೇಷನ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಡುತ್ತಾರೆ.

ಪೋಷಕರೇನು ಮಾಡಬೇಕು?

ಮಕ್ಕಳಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಅವರ ಉಸಿರಾಟದ ದರ ಗಮನಿಸಬೇಕು. ದೇಹದ ಉಷ್ಣತೆಯನ್ನು ಪ್ರತಿ 8 ಗಂಟೆಗೊಮ್ಮೆ ಥರ್ಮಾಮೀಟರ್‌ನಿಂದ ಅಳೆಯಬೇಕು. ಉಸಿರಾಟದ ದರ ನಿಮಿಷಕ್ಕೆ 40ಕ್ಕಿಂತ ಹೆಚ್ಚಿದ್ದರೆ, ನಾಡಿ ಬಡಿತ ನಿಮಿಷಕ್ಕೆ 120ಕ್ಕಿಂತ ಜಾಸ್ತಿ ಇದ್ದರೆ, ಆಮ್ಲಜನಕದ ಮಟ್ಟ95ಕ್ಕಿಂತ ಕಡಿಮೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅತಿಯಾದ ಜ್ವರ, ಹೊಟ್ಟೆನೋವು, ವಾಂತಿ ಇದ್ದರೆ ವೈದ್ಯರ ಜೊತೆ ಸಮಾಲೋಚನೆ ನಡೆಸಬೇಕು ಎಂದು ಮಕ್ಕಳ ವೈದ್ಯರು ತಿಳಿಸುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona