ಬೆಂಗಳೂರು(ಏ.18): ರಾಜ್ಯದಲ್ಲಿ ಶುಕ್ರವಾರ ಮತ್ತೆ ಮೂವರು ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಳೆದ ಮೂರು ದಿನಗಳಿಂದ ಏಳು ಮಕ್ಕಳಿಗೆ ಕೊರೋನಾ ಸೋಂಕು ತಗಲಿರುವುದು ಪತ್ತೆಯಾಗಿದ್ದು, ಒಟ್ಟಾರೆ ಸೋಂಕು ದೃಢಪಟ್ಟಿರುವ ಮಕ್ಕಳ ಸಂಖ್ಯೆ 25ಕ್ಕಿಂತ ಹೆಚ್ಚಾಗಿದೆ.

ಕಳೆದ ಬುಧವಾರ ಕಲಬುರಗಿಯಲ್ಲಿ ಕೇವಲ ಒಂದು ವರ್ಷದ ಹಸುಗೂಸಿನಲ್ಲಿ ಸೋಂಕು ಪತ್ತೆಯಾಗಿತ್ತು. ಗುರುವಾರ ವಿಜಯಪುರ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹೆಣ್ಣುಮಗು, ಕಲಬುರಗಿಯಲ್ಲಿ 5 ವರ್ಷದ ಗಂಡುಮಗು, ಬೆಂಗಳೂರು ನಗರದಲ್ಲಿ 13 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿತ್ತು. ಶುಕ್ರವಾರ ಬೆಂಗಳೂರಿನಲ್ಲಿ ಆರು ವರ್ಷದ ಗಂಡು ಮಗು, 11 ವರ್ಷದ ಹೆಣ್ಣು ಮಗು ಮತ್ತು ವಿಜಯಪುರದ ಆರು ವರ್ಷದ ಹೆಣ್ಣು ಮಗುವಿಗೆ ಸೋಂಕು ದೃಢಪಟ್ಟಿದೆ.

ಅಮೆರಿಕ ಸಂಸತ್‌ನಲ್ಲಿ ಮಂಡನೆಯಾಯ್ತು ಈ ಮಸೂದೆ, ಚೀನಾಗೆ ಶಾಕ್!

ರಾಜ್ಯದಲ್ಲಿ ಮಾ.9ರ ನಂತರ ಮಾಚ್‌ರ್‍ ಅಂತ್ಯದವರೆಗೆ ದಕ್ಷಿಣ ಕನ್ನಡ ಮೂಲದ 10 ತಿಂಗಳ ಮಗು ಸೇರಿದಂತೆ ಐದಾರು ಮಕ್ಕಳಿಗೆ ಮಾತ್ರ ಸೋಂಕು ದೃಢಪಟ್ಟವರದಿಯಾಗಿತ್ತು. ನಂತರ ಏ.17ರವರೆಗೆ ಒಟ್ಟು 22 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿನ 359 ಕೊರೋನಾ ಸೋಂಕಿತರಲ್ಲಿ ಮಕ್ಕಳ ಸಂಖ್ಯೆ 25 ಮೀರಿದೆ.