ಬೆಂಗಳೂರು(ಆ.06): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಸಾವಿನ ದರ ಕಡಿಮೆಯಾಗುತ್ತಿದೆ. ಜುಲೈ 20ಕ್ಕೆ ಶೇ.35 ರಷ್ಟುಮಾತ್ರ ಇದ್ದ ಚೇತರಿಕೆ ಪ್ರಮಾಣ ಆಗಸ್ಟ್‌ 5ರ ವೇಳೆಗೆ ಶೇ.49.30ಕ್ಕೆ ಏರಿಕೆಯಾಗಿದೆ. ಸಕ್ರಿಯ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ಅಲ್ಲದೆ, ಕಳೆದ ಎರಡು ವಾರದಲ್ಲಿ ಚೇತರಿಕೆ ಪ್ರಮಾಣ ಶೇ.15ರಷ್ಟುಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬರೋಬ್ಬರಿ ಶೇ.20ರಷ್ಟುಏರಿಕೆಯಾಗಿದೆ. ಆಗಸ್ಟ್‌ 5 ಬುಧವಾರದ ವೇಳೆಗೆ ರಾಜ್ಯದಲ್ಲಿ 1,51,449 ಪ್ರಕರಣ ವರದಿಯಾಗಿದ್ದು, 74,679 (ಶೇ.49.30) ಮಂದಿ ಗುಣಮುಖರಾಗಿದ್ದಾರೆ. ಇನ್ನು 73958 (ಶೇ.48.83) ಮಂದಿ ಮಾತ್ರ ಸಕ್ರಿಯ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗಳ ಆನ್‌​ಲೈನ್‌ ಕ್ಲಾಸ್‌ಗೆ ಕಿವಿಯೋಲೆ ಮಾರಿದ್ದ ತಾಯಿ!

ಇನ್ನು ಸಾವಿನ ದರವೂ ಕಡಿಮೆಯಾಗಿದ್ದು, ಜುಲೈ 20ರವರೆಗೆ ಒಟ್ಟು 71,069 ಸೋಂಕು ಪ್ರಕರಣ ವರದಿಯಾಗಿದ್ದರೆ 1464 ಮಂದಿ ಸಾವನ್ನಪ್ಪುವ ಮೂಲಕ ಶೇ.2.05 ರಷ್ಟುಸಾವಿನ ದರ ದಾಖಲಾಗಿತ್ತು. ಆಗಸ್ಟ್‌ 5ಕ್ಕೆ 151,449 ಪ್ರಕರಣಗಳಿಗೆ 2804 ಮಂದಿ ಮೃತಪಟ್ಟಿದ್ದು ಸಾವಿನ ದರ ಶೇ.1.85ಕ್ಕೆ ಇಳಿದಿದೆ.

2 ವಾರದಲ್ಲಿ ಚೇತರಿಕೆ ದರ ಶೇ.15 ಹೆಚ್ಚಳ: ಕಳೆದ ಎರಡು ವಾರದಲ್ಲಿ ಚೇತರಿಕೆ ದರ ಶೇ.15 (14.30) ರಷ್ಟುಹೆಚ್ಚಾಗಿದೆ. ಮೇ 31ಕ್ಕೆ 3,221 ಪ್ರಕರಣಗಳಲ್ಲಿ 1,218 ಮಂದಿ ಗುಣಮುಖರಾಗುವ ಮೂಲಕ ಚೇತರಿಕೆ ಪ್ರಮಾಣ ಶೇ.37.81 ರಷ್ಟಾಗಿತ್ತು. ಜೂನ್‌ ಅಂತ್ಯಕ್ಕೆ 15,242 ಪ್ರಕರಣ ವರದಿಯಾಗಿದ್ದರೆ ಬರೋಬ್ಬರಿ 7918 ಮಂದಿ ಗುಣಮುಖರಾಗಿದ್ದರು. ಆದರೆ ಜುಲೈನಲ್ಲಿ ಏಕಾಏಕಿ ಸೋಂಕು ಪ್ರಕರಣ ಹೆಚ್ಚಾಗಿದ್ದರಿಂದ ಚೇತರಿಕೆ ಪ್ರಮಾಣ ಕುಸಿಯಿತು. ಜುಲೈ 1ಕ್ಕೆ ಶೇ.48 ರಷ್ಟಿದ್ದ ಚೇತರಿಕೆ ಪ್ರಮಾಣ ಜುಲೈ 20ರ ವೇಳೆಗೆ ಕೇವಲ ಶೇ.35ಕ್ಕೆ ಇಳಿಕೆಯಾಗಿತ್ತು.

ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆ: 7 ಬಲಿ

ಇದೀಗ ಕಳೆದ ಎರಡು ವಾರದಿಂದ ಮತ್ತೆ ಚೇತರಿಕೆ ಪ್ರಮಾಣ ಉತ್ತಮಗೊಂಡಿದ್ದು, ಆಗಸ್ಟ್‌ 5ಕ್ಕೆ ಶೇ.49.30ಕ್ಕೆ ಹೆಚ್ಚಾಗಿದೆ. ಜುಲೈ 20ರಿಂದ ಈಚೆಗೆ ಶೇ.14.93ರಷ್ಟುಮಂದಿ ಚೇತರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಶೇ.20ರಷ್ಟುಏರಿಕೆ: ಬೆಂಗಳೂರು ನಗರದಲ್ಲಿ ಕಳೆದ ಎರಡು ವಾರದಲ್ಲಿ ಶೇ.20ರಷ್ಟುಚೇತರಿಕೆ ದರ ಹೆಚ್ಚಾಗಿದೆ. ಜುಲೈ 20ರಂದು 25,574 ಪ್ರಕರಣ ದಾಖಲಾಗಿ 6956 ಮಂದಿ ಗುಣಮುಖರಾಗುವ ಮೂಲಕ ಶೇ.27.19 ಮಂದಿ ಗುಣಮುಖವಾಗಿದ್ದರು. ಆಗಸ್ಟ್‌ 5ರ ವೇಳೆಗೆ ಬೆಂಗಳೂರಿನಲ್ಲಿ 64,881 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 30,960 ಮಂದಿ ಗುಣಮುಖರಾಗುವ ಮೂಲಕ ಶೇ.47.71 ಮಂದಿ ಚೇತರಿಸಿಕೊಂಡಿದ್ದಾರೆ.