'ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಬಂಧವಿಲ್ಲ, ದಾಂಪತ್ಯದಲ್ಲಿ ವಿರಸ ಬಂದ್ರೆ ತಲಾಕ್ ಅಷ್ಟೇ'..
ಇಸ್ಲಾಂ ಧರ್ಮದಲ್ಲಿ ಪತಿ- ಪತ್ನಿಯರ ನಡುವೆ ಜನ್ಮ ಜನ್ಮದ ಅನುಬಂಧ ಅನ್ನೋ ಮಾತೇ ಇಲ್ಲ. ದಾಂಪತ್ಯ ಜೀವನದಲ್ಲಿ ವಿರಸ ಬಂದಾಗ ತಲಾಖ್ ಹೇಳುತ್ತೇವೆ.
ಬೆಂಗಳೂರು (ಜು.05): ಏಕರೂಪ ನಾಗರಿಕ ಸಂಹಿತೆಯಿಂದ ಎಲ್ಲ ಧರ್ಮಗಳಿಗೂ ಸಮಸ್ಯೆ ಆಗಲಿದೆ. 'ಷರಿಯತ್' ಕಾನೂನು ಮುಸಲ್ಮಾನರ ಉಸಿರು, 'ಷರಿಯತ್' ಇಲ್ಲದೇ ಮುಸಲ್ಮಾನರು ಉಸಿರಾಡಲೂ ಸಾಧ್ಯವಿಲ್ಲ. ಇನ್ನು ಇಸ್ಲಾಂ ಧರ್ಮದಲ್ಲಿ ಜನ್ಮ ಜನ್ಮದ ಅನುಬಂಧ ಅನ್ನೋ ಮಾತೇ ಇಲ್ಲ. ದಾಂಪತ್ಯ ಜೀವನದಲ್ಲಿ ವಿರಸ ಬಂದಾಗ ಪತಿ- ಪತ್ನಿಯರು ಕೊಲೆ,. ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಅಂತಹ ಪರಿಸ್ಥಿತಿ ಬಂದಾಗ ದೇಹ ಉಳಿಸಿಕೊಳ್ಳಲು ಗೌರವದಿಂದ ತಲಾಕ್ ಕೊಡಬಹುದು ಎಂದು ಜಾಮಿಯಾ ಹಜರತ್ ಬಿಲಾಲ್ ಮತ್ತು ಸುನ್ನಿ ಉಲೆಮಾ ಬೋರ್ಡ್ ಧಾರ್ಮಿಕ ವಿದ್ವಾಂಸ ಮೊಹಮ್ಮದ್ ಶಫಿ-ಸ-ಅದಿ ಹೇಳಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code-UCC) ಜಾರಿಗೊಳಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಲವು ಕಡೆ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ, ಯುಸಿಸಿ ಘೋಷಣೆ ಮಾಡುವಾಗ ನರೇಂದ್ರ ಮೋದಿಯವರು ಆತಂಕ ಪಡಬೇಡಿ ಅಂತ ಹೇಳಿದ್ದಾರೆ. ಆದರೆ, ಇದರಿಂದ ಎಲ್ಲಾ ಧರ್ಮಕ್ಕೂ ತೊಂದರೆ ಆಗುತ್ತದೆ. ಹಲವಾರು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆ ವಿಚಾರ ಚರ್ಚೆ ನಡೆದಿದೆ ಎಂದು ಹೇಳಿದರು.
ವಾಹನ ಸವಾರರಿಗೆ ಮತ್ತೆ ಗುಡ್‌ನ್ಯೂಸ್, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಶೇ.50 ರಿಯಾಯಿತಿ
'ಷರಿಯತ್' ಕಾನೂನು ಮುಸಲ್ಮಾನರ ಉಸಿರು: ಮುಖ್ಯವಾಗಿ 'ಷರಿಯತ್' ಕಾನೂನು ಮುಸಲ್ಮಾನರ ಉಸಿರು ಆಗಿದೆ. 'ಷರಿಯತ್' ಇಲ್ಲದೇ ಮುಸಲ್ಮಾನರು ಉಸಿರಾಟ ಮಾಡುವುದಕ್ಕೂ ಆಗುವುದಿಲ್ಲ. ಮುಸ್ಲಿಮರ ವೈಯಕ್ತಿಕ ಕಾನೂನು (ಮುಸ್ಲಿಂ ಪರ್ಸನಲ್ ಲಾ - Muslim Personal Law) ನಿರ್ನಾಮ ಮಾಡಲು ವ್ಯವಸ್ಥಿತ ಷಡ್ಯಂತ್ರ ಮಾಡಲಾಗುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಯಾವುದೇ ಒಂದು ಧರ್ಮಕ್ಕೆ ಅವರವರ ಧರ್ಮ ಪಾಲನೆ ಮಾಡೋ ಸ್ವಾತಂತ್ರ್ಯವೂ ಕೂಡ ಸಂವಿಧಾನಾತ್ಮಕ ಹಕ್ಕಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆಯಿಂದ ಎಲ್ಲ ಧರ್ಮಕ್ಕೂ ಸಮಸ್ಯೆ ಆಗಲಿದೆ ಎಂದು ಹೇಳಿದರು.
ಇತರೆ ಧರ್ಮಗಳಿಗಿಂತ ಮುಸ್ಲಿಮರಲ್ಲಿ ದ್ವಿಪತ್ನಿತ್ವ ಕಡಿಮೆಯಿದೆ: ನಮ್ಮ ದೇಶದಲ್ಲಿ ದ್ವಿ-ಪತ್ನಿತ್ವ ಕೂಡ ಇತರೆ ಧರ್ಮಕ್ಕಿಂತ ಅಂಕಿ ಅಂಶ ನಮ್ಮಲ್ಲಿ ಕಡಿಮೆ ಇದೆ. ದಾಂಪತ್ಯ ಜೀವನದಲ್ಲಿ ವಿರಸ ಬಂದಾಗ, ಪತಿ ಪತ್ನಿಯರು ಕೊಲೆ ಅಥವಾ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಾರೆ. ದಾಂಪತ್ತದಲ್ಲಿ ಅಂತ ಪರಿಸ್ಥಿತಿ ಬಂದಾಗ ಷರಿಯತ್‌ನಂತೆ ತಲಾಕ್ ಹೇಳಬಹುದು. ಆದ್ದರಿಂದ ಶರೀರಕ್ಕೆ ಗೌರವ ಕೊಟ್ಟು ತಲಾಕ್ ಹೇಳಲಾಗುತ್ತದೆ ಅಷ್ಟೇ. ಇದರಿಂದ ನಮ್ಮ ಜೀವನ ಉಳಿಸಿ ಕೊಳ್ಳೋಕೆ ಅಂತಲೇ ತಲಾಕ್ ಹೇಳುತ್ತೇವೆ. ಜೊತೆಗೆ, ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಭಂಧ ಅನ್ನೋ ಮಾತೇ ಇಲ್ಲ. 2010 ರಲ್ಲಿ ಮುಸ್ಲಿಮರು ಶೇ.5 ಹಿಂದೂಗಳು ಶೇ.8.5 ಇತರ ಧರ್ಮಿಯರು ಹಾಗೂ ಶೇ.7 ವಿಚ್ಚೆಧನ ಆಗಿವೆ ಎಂದು ಹೇಳಿದರು.
ಸೌದೆ ರೀತಿಯಲ್ಲಿ ಕೊಡಲಿಯಿಂದ ಹೆಂಡ್ತಿ ಕುತ್ತಿಗೆ ಸೀಳಿದ ಪಾಪಿ ಗಂಡ
ಸ್ತ್ರೀಯರಿಗೆ ಖರ್ಚು ವೆಚ್ಚಗಳ ಭಾರ ಕೊಟ್ಟಿಲ್ಲ: ಇನ್ನೂ ಆಸ್ತಿ ವಿಚಾರದಲ್ಲಿ ಕೂಡ ಸಾಕಷ್ಟು ತಪ್ಪು ಕಲ್ಪನೆ ಇದೆ. ಸ್ತ್ರೀಗೆ ಯಾವುದೇ ಖರ್ಚು ವೆಚ್ಚಗಳ ಭಾರ ಕೊಟ್ಟಿಲ್ಲ. ತಂದೆ ಮಗಳಿಗೆ ಕೊಡಬೇಕು, ಗಂಡ ಹೆಂಡತಿಗೆ ಹಣ ಕೊಡಬೇಕು. ಹೀಗಾಗಿ ತಂದೆಯ ಆಸ್ತಿಯನ್ನ ಹೆಣ್ಣು ಮಕ್ಕಳಿಗೆ ಅರ್ಧ ಕೊಡಬೇಕು. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ಮಾಡುವಾಗ ಉಲ್ಮಾಗಳನ್ನು ಕೂಡ ಕೂರಿಸಿ ಚರ್ಚೆ ಮಾಡಿ ಮಾತನಾಡಬೇಕಾಗುತ್ತದೆ. ಯಾರೋ ಅನ್ಪಡ್ ವಿದ್ಯೆ ಇಲ್ಲದ ವ್ಯಕ್ತಿಗಳನ್ನ ಕೂರಿಸಬೇಡಿ. ಏನೇನೋ ಹೇಳಿಕೆ ನೀಡಲು ಅವಕಾಶ ಕೊಡಬೇಡಿ. ಈ ಯುಸಿಸಿಯನ್ನ ಮುಸಲ್ಮಾನರಾದ ನಾವು ಖಂಡಿತವಾಗಿ ಖಂಡಿಸುತ್ತೇವೆ ಎಂದು ಮೊಹಮ್ಮದ್ ಶಫಿ-ಸ-ಅದಿ ಹೇಳಿದ್ದಾರೆ.