GBA election committee :ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣಾ ಸಮಿತಿಯಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಅವರು, ಚುನಾವಣೆಯಲ್ಲಿ ಸೋತರೆ ಸಮಿತಿ ಹೊಣೆ ಎಂದು ವಾರ್ನ್.
ಬೆಂಗಳೂರು (ನ.5): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಂಬರುವ ಚುನಾವಣೆಗೆ ಸಿದ್ಧತೆ ಸಂಬಂಧ ರಚಿಸಲಾಗಿರುವ ಸಮಿತಿಯಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದು, ಮುಂದೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾದರೆ ಈ ಸಮಿತಿಯೇ ಜವಾಬ್ದಾರಿ ಹೊರಬೇಕು ಎಂದು ಗುಡುಗಿದ್ದಾರೆ.
ಯಲಹಂಕಕ್ಕೆ ಸೀಮಿತ ಅಲ್ಲ, ನನಗೂ ಶಕ್ತಿ ಇದೆ:
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಲಹಂಕಕ್ಕೆ ಸೀಮಿತ ಮಾಡಿದ್ದಾರೆ. ನನಗೂ ಶಕ್ತಿ ಇದೆ. ಕಳೆದ 47 ವರ್ಷಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಈ ಸಮಿತಿ ಪಟ್ಟಿ ಮಾಡಿದ್ದಾರಂತೆ. ಅದಕ್ಕೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸಹಿ ಹಾಕಿದ್ದಾರೆ. ನಮ್ಮ ಪಕ್ಷದಲ್ಲಿ ಸೋತವರೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರ ಮುಂದೆ ಹೋಗಿ ನಿಲ್ಲುವುದಕ್ಕೆ ಒಂದು ರೀತಿ ಆಗುತ್ತದೆ ಎಂದು ಹರಿಹಾಯ್ದರು.
ವಿಜಯೇಂದ್ರ ವಿರುದ್ಧ ಆಕ್ರೋಶ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನ್ನನ್ನು ಸಮಿತಿಯಿಂದ ಕೈಬಿಟ್ಟಿರುವ ಬಗ್ಗೆ ಈವರೆಗೆ ವಿಜಯೇಂದ್ರ ಅವರು ನನಗೆ ಒಂದು ಕರೆಯನ್ನೂ ಮಾಡಿಲ್ಲ. ಅವರು ಎಲ್ಲ ಮುಖಂಡರ ಸಭೆ ಕರೆದು ಸಮಿತಿ ರಚಿಸಬಹುದಿತ್ತು ಎಂದು ಹೇಳಿದರು.
ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಈ ಪಟ್ಟಿಯನ್ನು ಆರ್.ಅಶೋಕ್ ಮಾಡಿದರೊ ಅಥವಾ ಯಾರು ಮಾಡಿದರೊ ಗೊತ್ತಿಲ್ಲ. ಆದರೆ, ಅಶೋಕ್ ಅವರಾದರೂ ಇದನ್ನು ಗಮನಿಸಬೇಕಿತ್ತು. ಹಿಂದೆ ಇದೇ ಅಶೋಕ್ ಅವರು ಜಿಬಿಎ ಮಾಡಲು ಬಿಡಲ್ಲ. ಗಾಂಧೀಜಿ ತರ ದೇಹ ತುಂಡಾದರೂ ಬೆಂಗಳೂರು ಒಡೆಯಲು ಬಿಡಲ್ಲ ಎಂದಿದ್ದರು. ಈಗ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮುಂದೆ ಎದುರಾಗುವ ಜಿಬಿಎ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ಅದನ್ನು ಸಮಿತಿ ಮುಖಂಡರೇ ಹೊರಬೇಕು. ನಮ್ಮ ತಲೆಗೆ ಕಟ್ಟುವುದು ಬೇಡ. ನಾನು ನನ್ನ ಕ್ಷೇತ್ರ ನೋಡಿಕೊಳ್ಳುತ್ತೇನೆ ಎಂದು ಅತೃಪ್ತಿ ಹೊರಹಾಕಿದರು.
