ಬೆಂಗಳೂರು :  ‘ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ’ ಎಂಬ ಸಚಿವ ಪುಟ್ಟರಂಗ ಶೆಟ್ಟಿ ಹೇಳಿಕೆಗೆ ಮಾಜಿ ಸಚಿವ ಹಾಗೂ ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿರುವ ಪುಟ್ಟರಂಗ ಶೆಟ್ಟಿಹೇಳಿಕೆಯು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿಅವರನ್ನು ಸಚಿವರನ್ನಾಗಿ ಮಾಡುವ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೇ ಹೊರತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. 

ಸಚಿವರಾಗಿ ಹೇಳಿಕೆ ನೀಡುವಾಗ ಯೋಚಿಸಿ ನೀಡಬೇಕು. ಸಂಪುಟ ಸಚಿವರಾಗಿರುವವರೇ ಅಂತಹ ಹೇಳಿಕೆ ನೀಡಿವುದು ಅವರ ಸಚಿವ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ತಿಳಿಸಿದರು.

ಸಚಿವರಾಗಲಿ, ಶಾಸಕರಾಗಲಿ ಮುಖ್ಯಮಂತ್ರಿ ಕುರಿತು ಮನಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ಜೆಡಿಎಸ್‌ಗೆ ಮಾತ್ರವಲ್ಲ, ಕಾಂಗ್ರೆಸ್‌ಗೂ ಮುಜುಗರವನ್ನುಂಟು ಮಾಡುತ್ತದೆ. ಮೈತ್ರಿ ಸರ್ಕಾರ ಆಡಳಿತದ ವೇಳೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಕ್ರಮ ಶಾಸಕರು, ಸಚಿವರ ಘನತೆಗೆ ಶೋಭೆ ತರುವುದಿಲ್ಲ. ಮನಸೋ ಇಚ್ಛೆ ಹೇಳಿಕೆ ನೀಡುವ ಸಚಿವರು ಮತ್ತು ಶಾಸಕರನ್ನು ಕಾಂಗ್ರೆಸ್‌ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಿಸಬೇಕು ಎಂದರು.