Asianet Suvarna News Asianet Suvarna News

'ಕೇಸಲ್ಲಿ ಜಾರಕಿಹೊಳಿಯೇ ಸಂತ್ರಸ್ತ: ಎಸ್‌ಐಟಿ ದಿಕ್ಕುತಪ್ಪಿಸಲು ಸೀಡಿ ಟೀಂ ಯತ್ನ'

ಎಸ್‌ಐಟಿ ದಿಕ್ಕುತಪ್ಪಿಸಲು ಸೀಡಿ ಟೀಂ ಯತ್ನ| ಕೇಸಲ್ಲಿ ಜಾರಕಿಹೊಳಿಯೇ ಸಂತ್ರಸ್ತ| ಕಿಡಿಕಾರಿದ ವಕೀಲ ಶ್ಯಾಮ ಸುಂದರ್‌

Misleading SIT Ramesh Jarkiholi Lawyer Shyam Sundar Blames CD Lady pod
Author
Bangalore, First Published Apr 5, 2021, 9:50 AM IST

ಬೆಂಗಳೂರು(ಏ.05): ಸಿ.ಡಿ. ಪ್ರಕರಣದಲ್ಲಿ ಸಂಘಟಿತ ಅಪರಾಧ ಕೃತ್ಯವೆಸಗಿ ಸುಳ್ಳು ದೂರು ದಾಖಲಿಸಿರುವ ತಪ್ಪಿತಸ್ಥರು ವಿಶೇಷ ತನಿಖಾ ದಳ (ಎಸ್‌ಐಟಿ)ದ ಮೇಲೆ ಅನಗತ್ಯ ಒತ್ತಡ ಸೃಷ್ಟಿಸಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪರ ವಕೀಲ ಎಂ.ಎಸ್‌. ಶ್ಯಾಮಸುಂದರ್‌ ಕಿಡಿಕಾರಿದ್ದಾರೆ.

ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಆರೋಪಿಗಳು, ತಾವು ಮಾಡಿರುವ ಅಪರಾಧ ಕೃತ್ಯದಿಂದ ಪಾರಾಗಲು ತನಿಖಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

"

ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿಯು ಆರೋಪಿಯನ್ನು ನಾಲ್ಕು ಗಂಟೆ ವಿಚಾರಣೆ ನಡೆಸಿ, ತನ್ನನ್ನು ಮೂರು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ತಾನು ಸಂತ್ರಸ್ತೆಯೋ ಅಥವಾ ಪ್ರಕರಣದ ಆರೋಪಿಯೋ ಎಂಬ ಅನುಮಾನ ಮೂಡುತ್ತಿದೆ ಎಂದು ವಿಶೇಷ ತನಿಖಾ ದಳದ ತನಿಖೆ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದು, ವಿಶೇಷ ತನಿಖಾ ದಳದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ದೂರುದಾರರು ತಾವು ಮಾಡಿರುವ ಸಂಘಟಿತ ಅಪರಾಧಕ್ಕೆ ತಮ್ಮ ಮೇಲೆ ಆಗಬಹುದಾದ ಶಿಕ್ಷೆಯಿಂದ ಪಾರಾಗಲು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸಮಾಜದಲ್ಲಿ ಘನತೆಯುಳ್ಳ ವ್ಯಕ್ತಿಯ ಸುಲಿಗೆ, ತೇಜೋವಧೆಗೆ ಯತ್ನಿಸಿದ ತಂಡವು ಇದೀಗ ತನಿಖೆಯ ದಾರಿ ತಪ್ಪಿಸಲು ಸುಳ್ಳು ದೂರುಗಳನ್ನು ನೀಡುತ್ತಿದೆ. ನನ್ನ ಕಕ್ಷಿದಾರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿ ಅವರೇ ನಿಜವಾದ ಸಂತ್ರಸ್ತರು. ಸಂಘಟಿತ ಅಪರಾಧ ಹಾಗೂ ನಕಲಿ ದೃಶ್ಯಾವಳಿಗಳನ್ನು ಬಳಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಹಾಗೂ ಏಕಾಏಕಿ ಬೆಳೆಯಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಶ್ಯಾಮಸುಂದರ್‌ ಪ್ರಕಟಣೆ ಮೂಲಕ ಆಪಾದಿಸಿದ್ದಾರೆ.

ಇದೀಗ ತನಿಖೆ ಪ್ರಗತಿಯಲ್ಲಿದ್ದಾಗ ತನಿಖಾಧಿಕಾರಿಗಳು ಹಾಗೂ ವಿಶೇಷ ತನಿಖಾ ದಳದ ಮೇಲೆ ಅನಗತ್ಯ ಒತ್ತಡ ಹೇರಲು ಮತ್ತು ತನಿಖೆಯನ್ನು ತಪ್ಪು ದಾರಿಗೆ ಎಳೆಯಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ. ಸುಳ್ಳು ದೂರು ದಾಖಲಾಗಲು ಕಾರಣವಾದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಾತ್ರವಲ್ಲ ತನಿಖೆಯಲ್ಲಿ ದಿಕ್ಕು ತಪ್ಪಿಸಲು ಯತ್ನಿಸುವವರಿಗೆ ಶಿಕ್ಷೆಯಾಗುವ ಭರವಸೆ ಇದೆ ಎಂದಿದ್ದಾರೆ.

ಪ್ರಕರಣ ತನಿಖೆಯ ಹಂತದಲ್ಲಿದ್ದಾಗ ಕಾನೂನು ಮತ್ತು ನ್ಯಾಯಾಲಯ ಪ್ರಕ್ರಿಯೆಯನ್ನು ದಿಕ್ಕು ತಪ್ಪಿಸಲು ಇಂತಹ ಕೀಳು ತಂತ್ರ ಹೂಡುವುದು ಖಂಡನೀಯ. ಸುಳ್ಳು ಸೂರು ದಾಖಲಿಸಿದವರು ಹಾಗೂ ಕಾನೂನಿನ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದವರ ವಿರುದ್ಧ ಮತ್ತಷ್ಟುಕಠಿಣ ಕಾನೂನು ಕ್ರಮ ಜರುಗಿಸಲು ಅಗತ್ಯ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios