ಬೆಂಗಳೂರು(ಸೆ.06): ಸೈಬರ್‌ ಕಳ್ಳರು ಜನಸಾಮಾನ್ಯರ ಆನ್‌ಲೈನ್‌ ಖಾತೆಗಳನ್ನು ಹ್ಯಾಕ್‌ ಮಾಡಿ ವಂಚಿಸಿದ್ದಾಯ್ತು, ಈಗ ಜನರನ್ನು ರಕ್ಷಿಸುವ ಪೊಲೀಸರ ಸರದಿ. ಪೊಲೀಸ್‌ ಅಧಿಕಾರಿಗಳ ಫೇಸ್‌ಬುಕ್‌ ಖಾತೆಗಳನ್ನೇ ಹ್ಯಾಕ್‌ ಮಾಡಿ ಅದೇ ಹೆಸರಿನ ನಕಲಿ ಖಾತೆಗಳಿಂದ ಅವರ ಮಿತ್ರರಿಗೆ ಸಂದೇಶ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ವಂಚಿಸುವ ದಂಧೆ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಕಳೆದ ಮೂರೇ ದಿನಗಳಲ್ಲಿ ರಾಜ್ಯದಲ್ಲಿ ಇಂತಹ 3 ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು ಇನ್ನಷ್ಟುಜಾಗರೂಕರಾಗಿರಬೇಕಾದ ಪರಿಸ್ಥಿತಿ ತಲೆದೋರಿದೆ.

"

ಸೆ.3ರಂದು ಕಾರವಾರದಲ್ಲಿ ಇಂತಹ ಮೊದಲ ಪ್ರಕರಣ ದಾಖಲಾದರೆ, ಶುಕ್ರವಾರದಂದು ಬಳ್ಳಾರಿ ಮತ್ತು ರಾಯಚೂರುಗಳಲ್ಲಿ ಇಂತಹದ್ದೇ ಘಟನೆಗಳು ನಡೆದಿವೆ. ಈ ಮೊದಲು ವೈದ್ಯರ ನಕಲಿ ಫೇಸ್‌ಬುಕ್‌ ಖಾತೆಗಳ ಮೂಲಕ ಈ ರೀತಿಯ ವಂಚನೆ ನಡೆಯುತ್ತಿತ್ತು. ಇದೀಗ ಸೈಬರ್‌ ಕಳ್ಳರು ಪೊಲೀಸರ ಹೆಸರಿನಲ್ಲೇ ಜನರಿಗೆ ಟೋಪಿ ಹಾಕುತ್ತಿದ್ದಾರೆ.

ಹೀಗೆ ವಂಚಿಸುತ್ತಾರೆ: ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ಗಳ ಫೇಸ್‌ಬುಕ್‌ ಖಾತೆಗಳನ್ನು ಹ್ಯಾಕ್‌ ಮಾಡುವ ಸೈಬರ್‌ ಕಳ್ಳರು, ಬಳಿಕ ಅವರ ಹೆಸರು, ಫೋಟೋ, ವಿವರಗಳನ್ನು ಬಳಸಿ ಒಂದು ಚೂರೂ ಅನುಮಾನ ಬಾರದ ರೀತಿಯಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ಸೃಷ್ಟಿಸುತ್ತಾರೆ. ಬಳಿಕ ಅವರ ಫ್ರೆಂಡ್ಸ್‌ಲಿಸ್ಟ್‌ನಲ್ಲಿರುವವರಿಗೆ ಗೂಗಲ್‌ ಪೇ, ಫೋನ್‌ ಪೇ ಮೊದಲಾದ ಈ ವ್ಯಾಲೆಟ್‌ಗಳ ಮೂಲಕ ಇಂತಿಷ್ಟುಹಣ ಕಳಿಸುವಂತೆ ಸಂದೇಶ ಕಳುಹಿಸುತ್ತಾರೆ. ಈ ಮೂಲಕ ಹಣ ಲಪಟಾಯಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಇಂತಹ ಮೊದಲ ಘಟನೆ ಬೆಳಕಿಗೆ ಬಂದದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕಾರವಾರ ಗ್ರಾಮೀಣ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ರೇವಣಸಿದ್ದಪ್ಪ ಜಿರಂಕಲಗಿ ಹೆಸರಿನ ಖಾತೆಯಿಂದ ವ್ಯಕ್ತಿಯೋರ್ವರಿಗೆ ಗುರುವಾರ ಬೆಳಗ್ಗೆ ಸಂದೇಶ ಬಂದಿದ್ದು, .10,000 ಹಣ ಖಾತೆಗೆ ಹಾಕಿ ಎಂದು ಕೇಳಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡ ಕಾರವಾರದ ವ್ಯಕ್ತಿ ಕೂಡಲೇ ಪಿಎಸ್‌ಐಗೆ ಕರೆ ಮಾಡಿ ತಿಳಿಸಿದ್ದಾರೆ. ರೇವಣಸಿದ್ದಪ್ಪ ತಮ್ಮ ಫೇಸ್‌ಬುಕ್‌ ಖಾತೆ ಪರಿಶೀಲಿಸಿದಾಗ ಅಂತಹ ಯಾವುದೇ ಸಂದೇಶ ಹೋಗಿರಲಿಲ್ಲ. ಕೂಡಲೇ ಕಾರವಾರದ ವ್ಯಕ್ತಿಗೆ ಕರೆ ಮಾಡಿ ಹಣ ಕಳಿಸಬೇಡಿ ಎಂದಿದ್ದಾರೆ. ಕೇವಲ ಒಬ್ಬರಿಗೆ ಸಂದೇಶ ಕಳಿಸಿಲ್ಲ. ಹತ್ತಾರು ಜನರಿಗೆ ಕಳಿಸಿದ್ದಾರೆ. ರೇವಣಸಿದ್ದಪ್ಪ ಅವರ ಸ್ನೇಹಿತರೊಬ್ಬರು ಹಿಂದುಮುಂದು ಯೋಚಿಸದೆ .7,000 ಅವರ ಖಾತೆಗೆ ಹಾಕಿ ಕೈ ಸುಟ್ಟುಕೊಂಡಿದ್ದಾರೆ.

ಬಳ್ಳಾರಿ ನಗರದ ಕೌಲ್‌ಬಜಾರ್‌ ಸಿಪಿಐ ಸುಭಾಶ್ಚಂದ್ರ ಅವರ ಫೋಟೋ ಬಳಸಿ ಫೇಸ್‌ಬುಕ್‌ನಲ್ಲಿ ಫೇಕ್‌ ಅಕೌಂಟ್‌ ಸೃಷ್ಟಿಸಿಕೊಂಡ ಸೈಬರ್‌ ಕಳ್ಳರು ಹಣ ವಸೂಲಿಗೆ ಇಳಿದಿರುವ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತುಕೊಂಡಿರುವ ಪೊಲೀಸ್‌ ಅಧಿಕಾರಿ ಸುಭಾಶ್ಚಂದ್ರ ಅವರು ಕೂಡಲೇ ನಕಲಿ ಅಕೌಂಟ್‌ನ್ನು ತೆರವುಗೊಳಿಸಿದ್ದಾರೆ. ಅದೇ ರೀತಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ರಾಘವೇಂದ್ರ ಕುಷ್ಟಗಿ ಅವರ ಖಾತೆಯಿಂದಲೂ ಅವರ ಸ್ನೇಹಿತರಿಗೆ ಗೂಗಲ್‌ ಪೇ, ಫೋನ್‌ ಪೇ ಮೂಲಕ ಹಣ ಸಂದಾಯ ಮಾಡುವಂತೆ ಸಂದೇಶ ಕಳುಹಿಸಲಾಗಿತ್ತು. ತಕ್ಷಣವೇ ಅವರು ತಮ್ಮ ಸ್ನೇಹಿತರಿಗೆ ಹಣ ಸಂದಾಯ ಮಾಡದಂತೆ ತಿಳಿಸಿದ್ದರು.

ಈ ಮೂರು ಪ್ರಕರಣಗಳೂ ಸೈಬರ್‌ ಕ್ರೈಂ ವಿಭಾಗದಲ್ಲಿ ದಾಖಲಾಗಿದ್ದು, ಪೊಲೀಸರು ಜಾಲ ಭೇದಿಸುವಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಬಹಳಷ್ಟುಪ್ರಕರಣಗಳು ನಡೆದಿರುವ ಸಾಧ್ಯತೆಗಳಿದ್ದು, ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರವಿರುವಂತೆ ತಿಳಿಸಿದ್ದಾರೆ.