* ಗೂಗಲ್‌ ಮ್ಯಾಪ್‌ನಲ್ಲಿ ಹೆಸರು ಬದಲು: ದೂರು* ಹಝರತ್‌ ಬಪ್ಪನಾಡು ದೇಗುಲ ಎಂದು ತಿದ್ದಿದ ದುಷ್ಕರ್ಮಿಗಳು

ಮೂಲ್ಕಿ(ಏ.05): ಇತ್ತೀಚೆಗಷ್ಟೇ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ಬಹಿಷ್ಕಾರ ವಿವಾದ ಉಂಟಾಗಿದ್ದ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೆಸರನ್ನು ಇದೀಗ ಗೂಗಲ್‌ ಮ್ಯಾಪಿನಲ್ಲಿ ದುಷ್ಕರ್ಮಿಗಳು ‘ಹಝರತ್‌ ಬಪ್ಪಬ್ಯಾರಿ ದುರ್ಗಾಪರಮೇಶ್ವರಿ’ ಎಂದು ಬದಲಾಯಿಸಲಾಗಿದ್ದು, ಇದು ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿ ಮಂಡಳಿಯ ಗಮನಕ್ಕೆ ಬಂದಿದ್ದು ಮೂಲ್ಕಿ ಪೊಲೀಸ್‌ ಠಾಣೆ, ಸೈಬರ್‌ ಕ್ರೈಂ ಮತ್ತು ಕಮಿಷನರ್‌ಗೆ ದೂರು ನೀಡಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಸಾಮಾನ್ಯ ಜನರಿಗೂ ಸ್ಥಳದ ಹೆಸರು ಸೇರ್ಪಡೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಚಾಲಾಕಿತನ ತೋರಿಸಿ ಸಾಮರಸ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೆಸರನ್ನು ಬದಲಾಯಿಸಿದ್ದಾರೆ ಎಂಬ ಆರೋಪ ಭಕ್ತವಲಯದಿಂದ ಕೇಳಿಬಂದಿದೆ.

ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟವಾಡಬೇಡಿ: ಸುನಿಲ್‌ ಆಳ್ವ

ಮಿಥುನ್‌ರೈ ಅವರು, ಫ್ಲೆಕ್ಸ್‌ ಹಾಕಿರುವರು ಪುಂಡು ಪೋಕರಿಗಳು ಎಂದು ಹೇಳಿರುವುದು ಖಂಡನೀಯವಾಗಿದೆ ಎಂದು ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಮಂಡಲಾಧ್ಯಕ್ಷ ಸುನಿಲ್‌ ಆಳ್ವ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂಗಳು ಅವರ ಸಹಜವಾದ ಹಕ್ಕನ್ನು ಪ್ರತಿಪಾದಿಸಿರುತ್ತಾರೆ. ಹಿಂದೂ ದೇವಳದ ಅಧಿನಿಯಮ ಕೂಡ ಅದನ್ನು ಪ್ರತಿಪಾದಿಸುತ್ತದೆ. ಆದರೆ ನಿಮ್ಮ ತುಷ್ಟೀಕರಣ ನೀತಿಗಾಗಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ನಿಮ್ಮ ಹೇಳಿಕೆಯನ್ನು ಬಿಜೆಪಿ ಮೂಲ್ಕಿ ಮೂಡಬಿದಿರೆ ಮಂಡಳ ಖಂಡಿಸುತ್ತದೆ. ಮುಂದಿನ ದಿನದಲ್ಲಿ ನೀವು ಹೇಳಿರುವ ಪುಂಡು ಪೋಕರಿಗಳು ಶಾಶ್ವತವಾಗಿ ಕಾಂಗ್ರೆಸ್‌ಗೆ ಗೋರಿ ಕಟ್ಟಲು ಸಿದ್ಧವಾಗಿ ನಿಂತಿದ್ದಾರೆ. ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಬಪ್ಪನಾಡು ಜಾತ್ರೆ ಸಂಪನ್ನ

ಮೂಲ್ಕಿ ಸೀಮೆ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಗುರುವಾರ ರಾತ್ರಿ ಬ್ರಹ್ಮ ರಥೋತ್ಸವ, ಧ್ವಜಾವರೋಹಣ ಮೂಲಕ ಸಂಪನ್ನ ಗೊಂಡಿತು. ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.

ಜಾತ್ರಾ ಮಹೋತ್ಸವ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ಓಕುಳಿ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ ನಡೆದು ಶ್ರೀ ದೇವಿ, ಸಸಿಹಿತ್ಲು ಭಗವತಿಯರ ಭೇಟಿ, ರಥೋತ್ಸವ, ಸುಡುಮದ್ದು ಪ್ರದರ್ಶನ ಬಳಿಕ ಚಂದ್ರ ಶೇನ ಭೋಗರಮಕುದ್ರುವಿನ ಜಲಕದ ಕೆರೆಯಲ್ಲಿ ದೇವಿಯ ಜಳಕವಾಗಿ ಪ್ರಾತಃ ಕಾಲದಲ್ಲಿ ದೇವಸ್ಥಾನಕ್ಕೆ ಬಂದು ದೇವಿಯ ಜಲಕದ ಬಲಿ ನಡೆದು ಧ್ವಜಾವರೋಹಣ ಮೂಲಕ ಜಾತ್ರೆ ಸಂಪನ್ನಗೊಂಡಿತು.