‘ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಸಹ ಆತಂಕ, ಭಯಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬೆಂಗಳೂರು (ಸೆ.11) :  ‘ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಸಹ ಆತಂಕ, ಭಯಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕಾರಿಣಿ ಸದಸ್ಯರಾಗಿ ನೇಮಕವಾಗಿರುವ ರಾಜ್ಯಸಭಾ ಸದಸ್ಯ ನಸೀರ್‌ ಹುಸೇನ್‌ ಅವರಿಗೆ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿವೆ. ನಾವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದ್ದೇವೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಲ್ಲ. ಈಗಾಗಲೇ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕೋಮುವಾದಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

ದೇಶ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರೂ ಕೂಡ ಜ್ಯಾತ್ಯತೀತರಾದರೆ ಮಾತ್ರ ದೇಶ ಹಾಗೂ ಸಂವಿಧಾನ ಉಳಿಯಲು ಸಾಧ್ಯ. ಕೋಮುವಾದಿ ಶಕ್ತಿಗಳನ್ನು ಬೆಳೆಯದಂತೆ, ತಲೆ ಎತ್ತದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ, ಕರ್ತವ್ಯ ಎಲ್ಲರ ಮೇಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದವರು ಸಂವಿಧಾನವನ್ನು ವಿರೋಧಿಸಿದವರು. ಹಿಂದೂ ರಾಜ್ಯ, ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಬಿಜೆಪಿಯ ಹಿಡನ್‌ ಅಜೆಂಡಾ. ನಾವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದ್ದೇವೆ. ಕೋಮುವಾದಿಗಳಿಗೆ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಲ್ಲ. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕೋಮುವಾದಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ನಾಗಪುರ ಶಿಕ್ಷಣ ನೀತಿಯನ್ನು ರದ್ದು ಮಾಡಿ ಹೊಸ ಶಿಕ್ಷಣ ನೀತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಅದರಂತೆ ನಡೆದುಕೊಳ್ಳುತ್ತಿದ್ದೇವೆ. ಎಲ್ಲಾ ಜಾತಿ, ಧರ್ಮಗಳನ್ನೂ ಸಮಾನವಾಗಿ ಮುನ್ನಡೆಸುತ್ತೇವೆ. ನೀವೆಲ್ಲಾ ಹೋರಾಟ ಮಾಡಿ 2023ರಲ್ಲಿ ನಮ್ಮನ್ನು ಗೆಲ್ಲಿಸಿದ್ದೀರಿ. 2024ರ ಲೋಕಸಭೆಯಲ್ಲೂ ಅದೇ ರೀತಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಸಿಎಂ ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕೋದಿಲ್ಲ, ರಾಷ್ಟ ಭಕ್ತಿ ವಿಚಾರದಲ್ಲಿ ಗಟ್ಟಿಯಾಗಿಲ್ಲ: ಕೆ.ಎಸ್. ಈಶ್ವರಪ್ಪ

ಕೇಂದ್ರದ ಮಾಜಿ ಸಚಿವರಾದ ಕೆ.ರೆಹಮಾನ್‌ ಖಾನ್‌, ಸಲ್ಮಾನ್‌ ಖುರ್ಷಿದ್‌, ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಪ್ರಿಯಾಂಕ್‌ ಖರ್ಗೆ, ಶಾಸಕರಾದ ಎನ್‌.ಎ.ಹ್ಯಾರಿಸ್‌ ಸೇರಿ ಹಲವರು ಹಾಜರಿದ್ದರು.

ಪ್ರಧಾನಿ ಮೋದಿ ದೇಶದ ಹೆಸರಿನಲ್ಲೂ ಜನರ ನಡುವೆ ಹುಳಿ ಹಿಂಡಲು ಯತ್ನಿಸುತ್ತಿದ್ದಾರೆ. ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಎಂದೆಲ್ಲಾ ಹೇಳಿದವರು ಮೋದಿ. ಭಾರತ್‌ ಜೋಡೋ ಯಾತ್ರೆ ಮಾಡಿದವರು ನಾವು. ಇವರು ಇಂಡಿಯಾ-ಭಾರತದ ಬಗ್ಗೆ ನಮಗೆ ಪಾಠ ಹೇಳಿಕೊಡುತ್ತಾರಾ?

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಡಿಜೆ ಹಳ್ಳಿ, ಕೆಜಿ ಹಳ್ಳಿ ಅಮಾಯಕರ ರಕ್ಷಣೆ

ಡಿಜೆಹಳ್ಳಿ, ಕೆಜಿ ಹಳ್ಳಿ ಗಲಭೆ ವೇಳೆ ಹಿಂದಿನ ಸರ್ಕಾರ ಮನೆಯಲ್ಲಿದ್ದ ಬಡವರ ಮೇಲೆಲ್ಲಾ ಕೇಸುಗಳನ್ನು ಹಾಕಿದೆ. ಕಾನೂನಿನ ಅಡಿ ಅಂತಹ ಅಮಾಯಕರನ್ನು ರಕ್ಷಣೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್‌ ತಿಳಿಸಿದರು. ‘ನೀವೆಲ್ಲಾ ನಮಗೆ ಶಕ್ತಿ ತುಂಬಿದ್ದೀರಿ. ಅಮಾಯಕರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ’ ಎಂದರು.