ಬೆಂಗಳೂರು(ಆ.19): ನಗರದ ನಾಯಂಡಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವಂತೆ ವಸತಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಮಂಗಳವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನಾಯಂಡಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಬೇಕು, ಕೆರೆಯ ಆವರಣದಲ್ಲಿ ಶೌಚಾಲಯ ಸೌಲಭ್ಯ, ಆಸನ ಹಾಗೂ ಮಕ್ಕಳ ಆಟಿಕೆ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ ಸೇರಿದಂತೆ ಮೂರು ತಿಂಗಳೊಳಗೆ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದರು.

ಕೊರೋನಾ ಕಾಟ: ಆಕ್ಸಿಜನ್‌ ಕೊರತೆ ನೀಗಿಸಲು ಲಿಕ್ವಿಡ್‌ ಘಟಕ, ಸಚಿವ ಸುಧಾಕರ್‌

ಬಳಿಕ ನಾಯಂಡಹಳ್ಳಿ ರೈಲ್ವೆ ಅಂಡರ್‌ ಪಾಸ್‌ ತಪಾಸಣೆ ಮಾಡಿದ ಸಚಿವರು, ಮಳೆ ಬಂದಾಗ ಕೆಳಸೇತುವೆ ಬಳಿ ನೀರು ನಿಲ್ಲದಂತೆ ಅಂಡರ್‌ಪಾಸ್‌ ಸುತ್ತ ಡ್ರೈನ್‌ ನಿರ್ಮಿಸುವಂತೆ ಹೇಳಿದರು. ವಿನಾಯಕ ಲೇಔಟ್‌ನ ರೈಲ್ವೆ ಹಳಿ ಸಮೀಪ ಕೈಗೆತ್ತಿಕೊಂಡಿರುವ ಜಿಗ್‌-ಜಾಗ್‌ ರಸ್ತೆ ಕಾಮಗಾರಿ ಹಾಗೂ ರಾಜಕಾಲುವೆಯ ಆರ್‌.ಸಿ.ಸಿ. ತಡೆಗೋಡೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸಬೇಕು, ನಾಯಂಡಹಳ್ಳಿ ರಿಂಗ್‌ ರಸ್ತೆ ಜಂಕ್ಷನ್‌ ಅಭಿವೃದ್ಧಿಗೆ ಸೂಚಿಸಿ, ವೃಷಭಾವತಿ ನಾಲೆ ಹೂಳು ತೆಗೆಯಲು ಹಾಗೂ ಪಾದಚಾರಿ ಮಾರ್ಗಕ್ಕೆ ಸ್ಲಾಬ್‌ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸದಸ್ಯರಾದ ಸವಿತ ವಿ.ಕೃಷ್ಣಪ್ಪ, ಉಮೇಶ್‌ ಶೆಟ್ಟಿ, ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ, ಜಲಮಂಡಳಿ ಮುಖ್ಯ ಇಂಜಿನಿಯರ್‌ ಗಂಗಾಧರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.