ಮಂಗಳೂರು[ಜ.13]: ಸಚಿವ ಯು.ಟಿ.ಖಾದರ್‌ ಸ್ವತಃ ಸಂಚಾರ ಪೊಲೀಸರಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಟ್ರಾಫಿಕ್‌ ಪೊಲೀಸರಿಗೆ ಸಹಕರಿಸಿದ ಪ್ರಸಂಗ ಶನಿವಾರ ನಗರದ ಪಂಪ್‌ವೆಲ್‌ ಬಳಿ ನಡೆಯಿತು.

ಮೇಲ್ಸೇತುವೆ ಕಾಮಗಾರಿಗಾಗಿ ಇಲ್ಲಿನ ಪಂಪ್‌ವೆಲ್‌ ಬಳಿ ಹೆದ್ದಾರಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು. ಖಾದರ್‌ ಅವರು ಮಧ್ಯಾಹ್ನ 12.30ರ ವೇಳೆಗೆ ಮಂಗಳೂರಿನಿಂದ ಕೊಲ್ಯದೆಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಒದ್ದಾಡುತ್ತಿರುವುದನ್ನು ಗಮನಿಸಿದ ಸಚಿವರು ಸಂಚಾರ ಪೊಲೀಸರೊಂದಿಗೆ ಸ್ವತಃ ರಸ್ತೆಗಿಳಿದು, 20 ನಿಮಿಷಗಳ ಕಾಲ ಟ್ರಾಫಿಕ್‌ ಕ್ಲಿಯರ್‌ ಮಾಡಿದರು.

ಸಂಚಾರ ದಟ್ಟಣೆ ತಹಬಂದಿಗೆ ಬಂದ ನಂತರವೇ ಸಚಿವರು ಅಲ್ಲಿಂದ ತೆರಳಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.