ಇನ್ಮುಂದೆ ಯಾವುದೇ ಪಠ್ಯದಲ್ಲಿ ಟಿಪ್ಪು ವಿಚಾರಗಳಿಲ್ಲ?
ಟಿಪ್ಪು ಸುಲ್ತಾನ್ ಕುರಿತ ಪಠ್ಯ ಸೇರಿಸಿರುವುದಕ್ಕೆ ಹಿಂದಿನಿಂದಲೂ ವಿರೋಧವಿದೆ. ಈ ಬಗ್ಗೆ ಪರಿಶೀಲಿಸಿ ಕೈ ಬಿಡುವ ಬಗ್ಗೆ ಚಿಂತನೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು [ಅ.22]: ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯ ಸೇರಿಸಿರುವುದಕ್ಕೆ ಹಿಂದಿನಿಂದಲೂ ವಿರೋಧವಿದೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕುರಿತ ಪಠ್ಯ ಕೈಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಬರೆದಿರುವ ಪತ್ರ ಇನ್ನೂ ತಮ್ಮ ಕೈಸೇರಿಲ್ಲ. ಅವರು ಪತ್ರ ಬರೆದಿರುವ ಬಗ್ಗೆ ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಪತ್ರ ಕೈಸೇರಿದ ಬಳಿಕ ಪಠ್ಯ ಪುಸ್ತಕ ಸಮಿತಿ ಜತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಟಿಪ್ಪು ಸುಲ್ತಾನ್‌ನಿಂದ ನೊಂದಿರುವ ಹಾಗೂ ಅಕ್ರಮಣಕ್ಕೆ ಒಳಗಾಗಿರುವ ಕೊಡಗು, ದಕ್ಷಿಣ ಕನ್ನಡ, ಮೇಲುಕೋಟೆ ಭಾಗಗಳಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ತೀವ್ರ ವಿರೋಧವಿದೆ. ಹಿಂದಿನ ಸರ್ಕಾರಗಳು ಯಾರಿಗೂ ಬೇಡದ ಟಿಪ್ಪು ಜಯಂತಿ ಆಚರಿಸಿದ್ದವು. ನಾವು ಆಗಲೂ ಸಹ ಟಿಪ್ಪು ಜಯಂತಿ ಬೇಡ ಎಂದೇ ಹೇಳಿದ್ದೆವು. ಏಕೆಂದರೆ, ಇಂದು ಜನರು ಟಿಪ್ಪು ಸುಲ್ತಾನ್‌ನಿಂದ ಪ್ರೇರಣೆ ಪಡೆಯುವ ಪರಿಸ್ಥಿತಿ ಇಲ್ಲ. ಅಬ್ದುಲ್ ಕಲಾಂ, ಶಿಶುನಾಳ ಶರೀಫರ ಜಯಂತಿ ಮಾಡಿದರೆ ಮಕ್ಕಳು ಪ್ರೇರಣೆ ಪಡೆಯಲಿದ್ದಾರೆ ಎಂದರು.
ಯಾವುದೋ ಕಾರಣಕ್ಕೆ ಹಿಂದಿನ ಸರ್ಕಾರ ಟಿಪ್ಪು ಜಯಂತಿ ಮಾಡಿತ್ತು. ಕೊಡಗಿನ ಶಾಸಕರಾದ ಕೆ.ಜಿ.ಬೊಪ್ಪಯ್ಯ, ಅಪ್ಪಚ್ಚು ರಂಜನ್ ಟಿಪ್ಪು ಜಯಂತಿ, ಟಿಪ್ಪು ಪಠ್ಯವನ್ನು ವಿರೋಧಿಸುತ್ತಿದ್ದಾರೆ. ಅಪ್ಪಚ್ಚು ರಂಜನ್ ಅವರ ಪತ್ರ ತಮ್ಮ ಕೈಸೇರಿದ ಬಳಿಕ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.