ಬೆಂಗಳೂರು (ಜೂ. 23): ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗದಂತೆ ಗಮನ ಹರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.

ಜೂ.25ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸುವಂತೆ ಸಲಹೆ ನೀಡಿದರು.

ಮಳೆಗಾಲವಾಗಿರುವುದರಿಂದ ಕರಾವಳಿ, ಮಲೆನಾಡು, ಮುಂಬೈ- ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳು ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿರುತ್ತವೆ. ಕೆಲ ಮಕ್ಕಳು ದೋಣಿ, ಬೋಟ್‌ಗಳು ಮತ್ತು ಲಾಂಚ್‌ಗಳನ್ನು ಅವಲಂಬಿಸಿದ್ದಾರೆ. ಅವರು ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು.

 

ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದ ತಕ್ಷಣ ಹಾಗೂ ನಂತರ ಪಾಲಿಸಬೇಕಾದ ಕ್ರಮಗಳ ಕುರಿತು ಪರೀಕ್ಷಾ ಸಮಯ ಆರಂಭವಾಗುವ ತನಕ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಆಗಾಗ್ಗೆ ಪ್ರಕಟಿಸಬೇಕು. ಮಾಸ್ಕ್‌ ಮರೆತು ಬಂದವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಂದು ಮಾಸ್ಕ್‌ ನೀಡಲು ಅಗತ್ಯ ಕ್ರಮ ವಹಿಸುವುದು, ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿ ಆರೋಗ್ಯ ತಪಾಸಣಾ ಕೇಂದ್ರದ ಮೂಲಕವೇ ಹಾದು ಬರುವಂತೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಪ್ರತ್ಯೇಕ ಕೊಠಡಿ ಪರೀಕ್ಷೆ:

ಹೊರ ರಾಜ್ಯಗಳಿಂದ ಬರುವ ಮಕ್ಕಳು, ಕಂಟೈನ್ಮೆಂಟ್‌ ಪ್ರದೇಶದಿಂದ ಬರುವ ಮಕ್ಕಳು ಹಾಗೂ ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳನ್ನು ಸಹ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಕೇರಳದ ಕಾಸರಗೋಡು ಜಿಲ್ಲೆಯಿಂದ ಪ್ರತಿದಿನ 367 ವಿದ್ಯಾರ್ಥಿಗಳು ಕೇವಲ 5 ಕಿ.ಮೀ. ಅಂತರದ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುತ್ತಿದ್ದು, ಅವರಿಗೆ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪೂರಕ ಪರೀಕ್ಷೆಯಲ್ಲಿ ಅವಕಾಶ:

ಕೊರೋನಾ ಪಾಸಿಟಿವ್‌ ಇರುವ, ಕ್ವಾರಂಟೈನ್‌ನಲ್ಲಿರುವವರ ಮತ್ತು ಸಂಬಂಧಿಕರ ಸಂಪರ್ಕವಿರುವ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಅದೇ ರೀತಿ ಹೆಚ್ಚುವರಿ ಪರೀಕ್ಷಾ ಸಿಬ್ಬಂದಿ ಮತ್ತು ಕೊಠಡಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀ. ಅಂತರದಲ್ಲಿ ಬ್ಯಾರಿಕೇಡ್‌ ಹಾಕಲಾಗುತ್ತಿದೆ. ಆ ವಲಯವನ್ನು ಪಾಸ್‌ ವಲಯವೆಂದು ಘೋಷಿಸಿ ಗುರುತಿನ ಚೀಟಿ ಇರುವ ಪರೀಕ್ಷಾ ಸಿಬ್ಬಂದಿ ಮತ್ತು ಪ್ರವೇಶಪತ್ರವಿರುವ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರತಿದಿನ ಎರಡು ಬಾರಿ ಸ್ಯಾನಿಟೈಜೇಷನ್‌ ಮಾಡುವುದು, 200 ವಿದ್ಯಾರ್ಥಿಗೆ ಒಂದರಂತೆ ಆರೋಗ್ಯ ಕೇಂದ್ರ ಸ್ಥಾಪಿಸುವ ಜೊತೆಗೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪೊಲೀಸ್‌ ರಕ್ಷಣೆಯಲ್ಲಿ ಸಾಗಣೆ ಮಾಡಲಾಗುತ್ತದೆ ಎಂದು ಹೇಳಿದರು.

ಅಣಕು ಪರೀಕ್ಷೆ ನಾಳೆ:

ಮಕ್ಕಳು ಮತ್ತು ಪೋಷಕರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಜೂ.24ರಂದು ಬೆಳಗ್ಗೆ 11 ರಿಂದ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಸಲಾಗುವುದು ಎಂದರು.

ಇಂದು ಬೆಳಗ್ಗೆ ಆಕಾಶವಾಣಿಯಲ್ಲಿ ಸುರೇಶ್‌ ಸಂದರ್ಶನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಮಂಗಳವಾರ ಬೆಳಗ್ಗೆ 7.15ಕ್ಕೆ ಆಕಾಶವಾಣಿಯಲ್ಲಿ ಸಚಿವ ಸುರೇಶ್‌ಕುಮಾರ್‌ ಸಂದರ್ಶನ ಪ್ರಸಾರ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲ, ಸಮಸ್ಯೆಗಳನ್ನು ಕುರಿತು ಸಚಿವರೊಂದಿಗೆ ಮಾತನಾಡಿರುವ ಸಂದರ್ಶನವನ್ನು ಪ್ರಸಾರ ಮಾಡಲಾಗುತ್ತದೆ. ಬೆಳಗ್ಗೆ 10ರಿಂದ 10.30ಕ್ಕೆ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ಅವರೊಂದಿಗಿನ ವಿಶೇಷ ಸಂದರ್ಶನ ಕೂಡ ಪ್ರಸಾರ ಮಾಡಲಾಗುತ್ತದೆ.