ಪಕ್ಕೆಲುಬು’ ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಕ್ರಮ
ಶಿಕ್ಷಕರೊಬ್ಬರು ಹೇಳಿಕೊಡುವ ‘ಪಕ್ಕೆಲುಬು’ ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿರುವ ಶಿಕ್ಷಕರು ಹಾಗೂ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಸುರೇಶಹ ಕುಮಾರ್ ಹೇಳಿದ್ದಾರೆ.
ಬೆಂಗಳೂರು[ಜ.10] : ಶಾಲೆಯಲ್ಲಿ ಶಿಕ್ಷಕರೊಬ್ಬರು ಹೇಳಿಕೊಡುವ ‘ಪಕ್ಕೆಲುಬು’ ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿರುವ ಶಾಲೆ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿ ‘ಪಕ್ಕೆಲುಬು’ ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಯ ವಿಡಿಯೋ ಹಾಸ್ಯಾಸ್ಪದವಾಗಿ ಸಾಕಷ್ಟುವೈರಲ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸಚಿವರು ಗುರುವಾರ ಆದೇಶ ಹೊರಡಿಸಿದ್ದು, ಯಾವ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಯುವುದಕ್ಕಾಗಿ ‘ಸೈಬರ್ ಕ್ರೈಂ’ ಠಾಣೆ ದೂರು ನೀಡಲಾಗುತ್ತಿದೆ. ವರದಿ ಬಂದ ಬಳಿಕ ಸಂಬಂಧಪಟ್ಟಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲೆಮಾರಿ ಮಕ್ಕಳಿಗೆ ಟೆಂಟ್ ಸ್ಕೂಲ್!...
ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರ ಕಲಿಕೆ ನಂತರ ಆ ಪದದ ಸ್ಪಷ್ಟತೆಯಾದಾಗ ಮಕ್ಕಳು ಸರಿಯಾದ ಉಚ್ಚಾರಣೆ ಮಾಡುತ್ತಾರೆ. ಆದರೆ, ಮಗುವೊಂದು ಕಲಿಕಾ ಹಂತದಲ್ಲಿ ತಪ್ಪು ಉಚ್ಚಾರ ಮಾಡುವುದನ್ನು ವಿಡಿಯೋ ಪ್ರಸಾರ ಮಾಡಿದರೆ ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಅಲ್ಲದೆ, ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆಗಳಿರುತ್ತವೆ. ಶಿಕ್ಷಕರಾದವರು ಮಕ್ಕಳಿಗೆ ಸರಿಯಾದ ಉಚ್ಚಾರ ಮಾಡಿಸಬೇಕೇ ವಿನಃ ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ಸಾಮಾಜಿಕ ತಾಣಗಳಲ್ಲಿ ಹರಿಬಿಡುವುದು ಕೂಡ ಅಪರಾಧವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖವಾಗಿ ಶಿಕ್ಷಕರು ಪುಟ್ಟಮಕ್ಕಳ ಕಲಿಕೆಯನ್ನು ಈ ರೀತಿ ವ್ಯಂಗ್ಯವಾಗಿ ತೋರಿಸುವಂತಹ ಹಾಗೂ ಈ ಕೃತ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಡುವುದಕ್ಕೆ ಪ್ರೋತ್ಸಾಹ ನೀಡುವಂತಹ ಮುಖ್ಯ ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.