ಮೈಸೂರು, (ಫೆ.08): 10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋಗಳನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ನಾನೇ ಖುದ್ದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಮನವಿ ಮಾಡಿದ್ದೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು. 

ಸಭಾಧ್ಯಕ್ಷರಾದ ಕಾಗೇರಿ ಅವರು ಮನವಿ ಬಗ್ಗೆ ತಕ್ಷಣ ಸ್ಪಂದನೆ ನೀಡಿದ್ದಲ್ಲದೆ, ತಾವೂ ಸಹ ಮೈಸೂರಿನ ಅಭಿವೃದ್ಧಿಗೆ ಇವರ ಕೊಡುಗೆ ಬಗ್ಗೆ ತಿಳಿದಿದ್ದೇನೆ. ಹೀಗಾಗಿ ವಿಧಾನಸಭೆಯಲ್ಲಿ ಫೋಟೋ ಅಳವಡಿಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದ್ದಾಗಿ ಸಚಿವರು ಸುದ್ದಿಗಾರರಿಗೆ  ತಿಳಿಸಿದರು.

ಸಿದ್ದರಾಮಯ್ಯ ಒಬ್ಬರು ಡಕೋಟಾ: ಟಗರಿಗೆ ತಿರುಗೇಟು ಕೊಟ್ಟ ಸಚಿವ

ಸಿದ್ದರಾಮಯ್ಯನವರಿಂದ ವೃಥಾ ಆರೋಪ
ಮುಖ್ಯಮಂತ್ರಿಗಳ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ. ಯಾವ ರಾಜಕಾರಣಿಗಳು ಯಾರು ಬೇಲ್ ನಲ್ಲಿಲ್ಲ ಎಂದು ಪ್ರಶ್ನಿಸಿದ ಸಚಿವರು, ಕೆಲವು ವೈಯುಕ್ತಿಕ ವಿಷಯಗಳಲ್ಲೂ ಪ್ರಕರಣಗಳಿರುತ್ತವೆ. ಅದಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಕೋಟದಲ್ಲಿ ವಿರೋಧ ಪಕ್ಷದವರು
ಸರ್ಕಾರ ಏನೂ ಮಾಡಿಲ್ಲಎಂದು ಹೇಳುವುದು ವಿರೋಧ ಪಕ್ಷದವರ ಕೆಲಸವಾಗಿದೆ. ಅದಿಲ್ಲದೇ 
ವಿರೋಧ ಪಕ್ಷದವರು ಜನಪ್ರಿಯ ಸರ್ಕಾರ ಎಂದು ಹೇಳುತ್ತಾರೆಯೇ? ಅವರೇ ಡಕೋಟಾದಲ್ಲಿದ್ದಾರೆ. ಸುಮ್ಮನೆ ನಮ್ಮ ಬಗ್ಗೆ ಹೇಳುತ್ತಿದ್ದಾರೆ ಎಂದು ಹೇಳಿದ ಸಚಿವರು, ಅವರೇ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷದವರಾಗಿ ಅವರೇ ಜಿಲ್ಲೆಗಳಿಗೆ ಪ್ರವಾಸಕ್ಕೂ ಹೋಗುತ್ತಿಲ್ಲ. ಅವರು ಪ್ರವಾಸಕ್ಕೆ ಸಹ ಸರ್ಕಾರವೇ ಹಣ ನೀಡುತ್ತದೆ. ಆದರೆ, ಅವರು ಮಾಡುವ ಕೆಲಸ ಮಾಡದೇ ಸುಮ್ಮನೆ ಈ ರೀತಿ ಹೇಳುತ್ತಾರೆ ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕರು, ವಿರೋಧಪಕ್ಷಗಳ ಸದಸ್ಯರು ಮಾಡಿದ ಆರೋಪಕ್ಕೆ ನಾನೂ ಸಹಿತ ಎಲ್ಲರೂ ಮಾತನಾಡಿದ್ದೇವೆ. ಸಮರ್ಥವಾಗಿ ಎದುರಿಸಿದ್ದೇವೆ. ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಿಳಿಸಿದ್ದೇವೆ. ಇನ್ನು ಮುಖ್ಯಮಂತ್ರಿಗಳು ಮಾತನಾಡಲು ನಿಂತಾಗ ನಾವು ಯಾರೂ ಮಾತನಾಡುವುದಿಲ್ಲ. ಅವರು ನಮ್ಮ ನಾಯಕರು. ಅವರು ಸದನದಲ್ಲಿ ಒಂದೂವರೆ ಗಂಟೆಗಳ ಕಾಲ ಮಾತನಾಡಿ ಸರ್ಕಾರದ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಅವರೊಬ್ಬರನ್ನೇ ಏಕಾಂಗಿಯನ್ನಾಗಿ ಬಿಟ್ಟಿದ್ದೇವೆ ಎಂಬುದು ಸುಳ್ಳು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.