ಬೆಂಗಳೂರು(ಸೆ.12): ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1.10 ಲಕ್ಷ ಕೋಟಿ ರು. ಹಣ ಬೇಕಾಗಿದೆ. ಎಷ್ಟೇ ಕಷ್ಟವಾದರೂ ಸಾಲ ಮಾಡಿಯಾದರೂ ನೀರಾವರಿ ಯೋಜನೆ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಯಾವ ಯೋಜನೆಯನ್ನೂ ಸ್ಥಗಿತಗೊಳಿಸುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೃಷ್ಣಾ ಮೆಲ್ದಂಡೆ ಯೋಜನೆಯ ಭೂ ಸ್ವಾಧೀನಕ್ಕೆ ದರ ನಿಗದಿ ಸಂಬಂದ ಕೆಲ ಸಮಸ್ಯೆ ಇದೆ. ಈ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಉಳಿದಂತೆ ಎತ್ತಿನಹೊಳೆ ಯೋಜನೆಯಡಿ ಲಿಫ್ಟ್‌ ಕಾಂಪೊನೆಂಟ್‌ ಮತ್ತು ಗುರುತ್ವ ಕಾಲುವೆಯ 31 ಕಿ.ಮೀ.ವರೆಗಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ 2021 ಮುಂಗಾರು ಹಂಗಾಮಿನಲ್ಲಿ ವೇದಾ ವ್ಯಾಲಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ಬೇರೆ ರೋಗಿಗಳಿಗೂ ಚಿಕಿತ್ಸೆ: ಸಚಿವ ಜಾರಕಿಹೊಳಿ

ತೀವ್ರ ಆರ್ಥಿಕ ಸಂಕಷ್ಟವಿದೆ:

ರಾಜ್ಯ ಸರ್ಕಾರಕ್ಕೆ ತೀವ್ರ ಆರ್ಥಿಕ ಸಂಕಷ್ಟವಿದೆ. ಈ ಬಗ್ಗೆ ಯಾವುದೇ ಮುಚ್ಚುಮರೆ ಮಾಡುವ ಅಗತ್ಯವಿಲ್ಲ. ಕೇಂದ್ರದಿಂದ ಬರಬೇಕಿರುವ ಅನುದಾನಗಳ ಬಗ್ಗೆ ಚರ್ಚಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ಜಿಎಸ್‌ಟಿ ಹಣ ಆದಷ್ಟೂಬೇಗ ಬಿಡುಗಡೆಯಾಗುವ ವಿಶ್ವಾಸವಿದೆ. ಹೀಗಾಗಿ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಆಲಮಟ್ಟಿಜಲಾಶಯದ ಹಿನ್ನೀರಿನಲ್ಲಿ ಗ್ರಾಮಗಳು ಮುಳುಗಡೆಯಾಗದಂತೆ ನವೀನ ತಂತ್ರಜ್ಞಾನದಲ್ಲಿ ಜಲಾಶಯದ ಎತ್ತರ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದರು.

52 ಅಣೆಕಟ್ಟಗಳ ಪುನಶ್ಚೇತನಕ್ಕೆ ಕ್ರಮ:

ರಾಜ್ಯದಲ್ಲಿನ ಅಣೆಕಟ್ಟುಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡುತ್ತಿದ್ದೇವೆ. ವಿಶ್ವಬ್ಯಾಂಕ್‌ ನೆರವಿನೊಂದಿಗೆ 1,500 ಕೋಟಿ ರು. ವೆಚ್ಚದಲ್ಲಿ 52 ಆಣೆಕಟ್ಟಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಸಂಬಂಧ 750 ಕೋಟಿ ರು. ರಾಜ್ಯದ ಪಾಲು ನೀಡಲು ಸಿದ್ಧವಿದ್ದೇವೆ. ಶೀಘ್ರವೇ ಹಣಕಾಸು ಇಲಾಖೆ ಸಹಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

1 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ:

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ನೀರಾವರಿ ಯೋಜನೆಗಳಿಂದ 1 ಲಕ್ಷ ಹೆಕ್ಟೇರ್‌ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಿದ್ದೇವೆ. ಜತೆಗೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಜಮೀನುಗಳ ರೈತರಿಗೆ ಶೀಘ್ರವಾಗಿ ಪರಿಹಾರ ತಲುಪಿಸಲು ಪ್ರತ್ಯೇಕ ಲೆಕ್ಕ ಶೀರ್ಷಿಕೆಯೊಂದಿಗೆ ಅನುದಾನ ಹಂಚಿಕೆ ಮಾಡಿ ಮೀಸಲಿಡಲು ತೀರ್ಮಾನ ಮಾಡಲಾಗಿದೆ. ಜತೆಗೆ ಜಲಸಂಪನ್ಮೂಲ ಇಲಾಖೆಗೆ ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನವನ್ನು ನೀರಾವರಿಯೇತರ ಕಾಮಗಾರಿಗಳಿಗೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಿ ನೀರಾವರಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಮೇಕೆದಾಟು ಅನುಮತಿಗೆ ಕೇಂದ್ರದ ಜತೆ ಚರ್ಚೆ

ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಹೀಗಾಗಿ ಶನಿವಾರ ನಾನೇ ಖುದ್ದಾಗಿ ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಯೋಜನೆ ಅನುಮತಿಗಾಗಿ ಕೇಂದ್ರದೊಂದಿಗೆ ಚರ್ಚಿಸುತ್ತೇನೆ ಎಂದು ರಮೇಶ್‌ ಜಾರಕಿಹೊಳಿ ತಿಳಿಸಿದರು.

ಮೇಕೆದಾಟು ಯೋಜನೆಯಿಂದ 3,181 ಹೆಕ್ಟೇರ್‌ ವನ್ಯಜೀವಿ ಸಂರಕ್ಷಿತ ಅರಣ್ಯ ಸೇರಿದಂತೆ 5,051 ಹೆಕ್ಟೇರ್‌ ಅರಣ್ಯ ಭೂಮಿ ಮುಳುಗಡೆಯಾಗುತ್ತಿದೆ. ಹೀಗಾಗಿ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಚರ್ಚಿಸಲಾಗುವುದು ಎಂದರು.

ಕೆಆರ್‌ಎಸ್‌ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧ

ಕೆ.ಆರ್‌.ಎಸ್‌. ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 425 ಕೋಟಿ ರು. ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.