ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಸಂಚಾರ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಜೂ.1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು(ಮೇ.30): ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು(ಮಂಗಳವಾರ) ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳ ಸಭೆ ಕರೆದಿದ್ದಾರೆ. ನಗರದ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಸಚಿವರು ಉಚಿತ ಬಸ್ ಪಾಸ್ ಯೋಜನೆ ಜಾರಿ ಸೇರಿದಂತೆ ನಿಗಮಗಳ ಸದ್ಯದ ಆರ್ಥಿಕ ಸ್ಥಿತಿಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆಯಲಿದ್ದಾರೆ. ಪ್ರಸ್ತುತ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ನಿಗಮಗಳ ಆದಾಯದಲ್ಲಿ ಬಸ್ ನೀಡಲು ಸಾಧ್ಯವಿಲ್ಲ. ಸರ್ಕಾರದ ಯೋಜನೆ ಇದಾಗಿರುವ ಕಾರಣ ನಿಗಮಗಳಿಂದ ಹಣ ಭರಿಸುವ ಸಾಮರ್ಥ್ಯ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ನಾಲ್ಕು ನಿಗಮಗಳಿಗೆ ಉಚಿತ ಬಸ್ ಪಾಸ್ ಸಬ್ಸಿಡಿ ನೀಡುವಂತೆ ಸಭೆಯಲ್ಲಿ ನಿರ್ಧರಿಸುವ ಸಂಭವವಿದೆ.
ಜೂ.1ರ ಸಂಪುಟ ಸಭೆಯಲ್ಲಿ ನಿರ್ಧಾರ:
ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಸಂಚಾರ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಜೂ.1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಿಳೆಯರು ಉಚಿತವಾಗಿ ಬಸ್ ಸಂಚರಿಸಿದ್ದಕ್ಕೆ ಪ್ರತಿಯಾಗಿ ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ನೀಡಬೇಕಾಗುತ್ತದೆ. ಹಾಗಾಗಿ ಎಷ್ಟುಮಹಿಳೆಯರು ಸಂಚರಿಸುತ್ತಾರೆಂಬ ಬಗ್ಗೆ ಮಾಹಿತಿ ಅಧಿಕಾರಿಗಳ ಜೊತೆ ಚರ್ಚಿಸಬೇಕಾಗುತ್ತದೆ. ಎಷ್ಟುಶಾಲಾ ವಿದ್ಯಾರ್ಥಿಗಳು ಉಚಿತವಾಗಿ ಬಸ್‌ನಲ್ಲಿ ಸಂಚರಿಸುತ್ತಾರೆಂಬ ಮಾಹಿತಿ ಇರುತ್ತದೆ. ಅದೇ ರೀತಿ ಮಹಿಳೆಯರ ಮಾಹಿತಿ ಪಡೆಯಬೇಕಾಗುತ್ತದೆ. ಆ ಪ್ರಕಾರ ಹಣವನ್ನು ಇಲಾಖೆ ಕೊಡಬೇಕಾಗುತ್ತದೆ ಎಂದರು.
ಸಿದ್ದು ಸಂಪುಟ ಟೇಕಾಫ್‌ಗೆ ಸಿದ್ಧ: ಕ್ಲಿಷ್ಟವಾದ ಸವಾಲು ನಿಭಾಯಿಸಿದ ಸಿಎಂ..!
‘ಚುನಾವಣೆ ವೇಳೆ ನಾವು ಕೊಟ್ಟ ಗ್ಯಾರಂಟಿಗಳನ್ನು ಜಾರಿಗೆ ತಂದೆ ತರುತ್ತೇವೆ. ಪ್ರತಿಪಕ್ಷಗಳು ಸ್ವಲ್ಪ ತಾಳ್ಮೆಯಿಂದ ಇರಬೇಕು. ಐದು ವರ್ಷ ಆಡಳಿತ ಮಾಡಿದ್ದಾರೆ. ಈಗ ಪ್ರತಿಪಕ್ಷದಲ್ಲಿ ಕೆಲಸ ಮಾಡುವಂತೆ ಜನರು ಆದೇಶಿಸಿದ್ದಾರೆ. ಹೀಗಾಗಿ ಅವರು ರಚನಾತ್ಮಕ ಟೀಕೆ,ಸಲಹೆ ಕೊಡುವ ಕೆಲಸ ಮಾಡಬೇಕು’ ಎಂದರು.
ಸಾರಿಗೆ ನಿಗಮಗಳ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಬೇಡಿಕೆ ಈಡೇರಿಸಬೇಕೆಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಸಾರಿಗೆ ನೌಕರರಿಗೆ ಸರ್ಕಾರವೇ ವೇತನ ನೀಡುವ ಪರಿಸ್ಥಿತಿ ಬಂದಿತ್ತು. ಸಾರಿಗೆ ನಿಗಮಗಳು ತೀವ್ರವಾದ ಆರ್ಥಿಕ ತೊಂದರೆ ಎದುರಿಸಿತ್ತು. ಅವುಗಳ ಆರ್ಥಿಕ ಸುಧಾರಣೆ ಮಾಡಬೇಕಾಗಿದೆ. ಹಾಗಾಗಿ ಶೀಘ್ರದಲ್ಲಿ ಸಾರಿಗೆ ನಿಗಮಗಳ ಅಧಿಕಾರಿಗಳ ಸಭೆ ಕರೆದು, ಅವುಗಳ ಸದ್ಯದ ಆರ್ಥಿಕ ಸ್ಥಿತಿ, ಹೊಸ ಬಸ್‌ಗಳ ಖರೀದಿ ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆಯಲಾಗುವುದು, ನಂತರ ಸರ್ಕಾರಕ್ಕೆ ಯಾವ ರೀತಿ ಸಹಾಯ ಮಾಡಬೇಕು ಎಂಬ ಬಗ್ಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
