ಬೆಂಗಳೂರು(ಜೂ.28): ಕ್ವಾರಂಟೈನ್‌ನಲ್ಲಿ ಇರುವ ಕೆಲವರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದಾರೆ. ಇದು ಪೊಲೀಸ್ ಇಲಾಖೆ ಗಮನಕ್ಕೂ ಕೂಡ ಬಂದಿದೆ. ಹೀಗಾಗಿ ರಾತ್ರಿ 8 ಗಂಟೆಗೆ ಕರ್ಫ್ಯೂ ಜಾರಿ ಮಾಡಿದ್ದೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಗಮನದಲ್ಲಿಟ್ಟುಕೊಂಡು ಕರ್ಫ್ಯೂ ಜಾರಿಗೆ ತಂದಿದ್ದೇವೆ ಎಂದು ನೂತನ ಕೋವಿಡ್‌ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.

"

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಮಾದರಿಯಾದ ಒಂದು ಟ್ಯಾಗ್ ವ್ಯವಸ್ಥೆ ಅಳವಡಿಸುತ್ತೇವೆ. 14 ದಿನ ಟ್ಯಾಗ್ ಆ್ಯಕ್ಟಿವ್ ಇರತ್ತೆ,  ಟ್ಯಾಗ್ ಕಟ್ ಮಾಡಿದರೆ, ಯಾರಾದ್ರೂ ಕ್ವಾರಂಟೈನ್ ಸೆಂಟರ್‌ನಿಂದ ಹೊರ ಹೋದರೆ ಬೀಪ್ ಸೌಂಡ್ ಬರತ್ತದೆ. ಅಧಿಕಾರಿಗಳಿಗೆ ಟ್ಯಾಗ್‌ನಿಂದ ಮೆಸೇಜ್ ಬರುವ ವ್ಯವಸ್ಥೆ ಮಾಡುತ್ತಿದ್ದೇವೆ. ಯಾವ ಕೊರೋನಾ ಪೇಷಂಟ್ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ, ಅಂಥ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

 ಅಶೋಕ್‌ಗೆ ಕೊರೋನಾ ಉಸ್ತುವಾರಿ: ಸಚಿವ ಶ್ರೀರಾಮುಲು ಬಾಯಿಯಿಂದ ಬಂದ ಮಾತುಗಳು

ಆಶಾ ಕಾರ್ಯಕರ್ತೆಯರು, ಪೊಲೀಸರು, ವೈದ್ಯರು, ನರ್ಸ್‌ಗಳಿಗೆ ಹೆಚ್ಚಿನ ವ್ಯವಸ್ಥೆ ಮಾಡುತ್ತಿದ್ದೇವೆ. ಎರಡು ನಿಮಿಷದಲ್ಲಿ ಲಂಗ್ಸ್ ಕಂಜೆಷನ್ ಟೆಸ್ಟ್ ಮಾಡುವ ಮಷಿನ್ ಬಂದಿದೆ. ಈ ಮಷಿನ್‌ನಲ್ಲಿ ಯಾರಿಗೆ ಸೋಂಕಿನ ಅನುಮಾನ ಇರುತ್ತದೊ, ಅಂತವರಿಗೆ ಕೊರೋನಾ ಟೆಸ್ಟ್‌ಗೆ ಕಳಿಸುತ್ತೇವೆ. ಈ ಪ್ರಯೋಗವನ್ನೂ ಕೂಡ ಮಾಡುತ್ತಿದ್ದೇವೆ. ಏನೆಲ್ಲ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಬಳಸಿಕೊಳ್ಳುತ್ತಿದ್ದೇವೆ. ಏಕಮುಖವಾಗಿ ಕೊರೋನಾ ನಿಯಂತ್ರಿಸೋದೇ ನಮ್ಮ ಉದ್ದೇಶವಾಗಿದೆ.  ಈ ಸಂಬಂಧ ಸರ್ಕಾರ ಸರ್ವ ಪ್ರಯತ್ನಗಳನ್ನೂ ಕೂಡ ಮಾಡುತ್ತಿದೆ ಎಂದು ಹೇಳಿದ್ದಾರೆ.  ಆಯುರ್ವೇದ ಚಿಕಿತ್ಸೆಯ ಬಗ್ಗೆಯೂ ಗಂಭೀರವಾಗಿ ಚರ್ಚೆ ಮಾಡುತ್ತಿದ್ದೇವೆ. ಮೌಖಿಕವಾಗಿ ಇದೆಲ್ಲವನ್ನೂ ತೀರ್ಮಾನ ಮಾಡಿದ್ದೇವೆ. ನಾಳೆ(ಸೋಮವಾರ) ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ. 

ಕೋವಿಡ್ ಉಸ್ತುವಾರಿ ಸಚಿವರ ನಡುವೆ ಮುಸುಕಿನ ಗುದ್ದಾಟದ ಸಂಬಂಧ ಸಚಿವ ಕೆ. ಸುಧಾಕರ್ ಟ್ವೀಟ್ ಮಾಡಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ  ಉತ್ತರಿಸಿದ ಆರ್‌. ಅಶೋಕ್‌ ಅವರು, ನೋಡಿ ಇದು ಯುದ್ಧದ ಸಂದರ್ಭ, ಯಾರು ಏನೂ ಅನ್ನೋದು ಮುಖ್ಯವಲ್ಲ, ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೋಗಬೇಕಿದೆ. ನಾನು ಏನೂ ಮಾಡ್ತಿಲ್ಲ, ನನ್ನದು ಏನೂ ಇಲ್ಲ ಅಂತಲೇ ಅಂದುಕೊಳ್ಳೋಣ, ಆದರೆ ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಅಷ್ಟೇ ಎಂದು ಹೇಳುವ ಮೂಲಕ ನಾಳೆ ಯಾರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಸಭೆ ನಡೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಸಚಿವ ಅಶೋಕ್ ನಿರಾಕರಿಸಿದ್ದಾರೆ.