ಪಾಂಡವಪುರ: ಸಮಿಶ್ರ ಸರ್ಕಾರ ಹಾಗೂ ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಪಣ ತೊಟ್ಟು ಕೆಆರ್‌ಎಸ್‌ನಲ್ಲಿ ಕಾವೇರಿ ಪ್ರತಿಮೆ ನಿರ್ಮಿಸಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆಯನ್ನು ರೂಪಿಸಲು ಹೊರಟಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಯಾರು ಎಷ್ಟೇ ಕೂಗಾಡಿದರೂ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದ್ದಾರೆ. 

ಕೆರೆ ತೊಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಕೆಆರ್‌ಎಸ್‌ ಅಣೆಕಟ್ಟೆಸುತ್ತಮುತ್ತಲಿನ ಜಮೀನು ವಶಪಡಿಸಿಕೊಳ್ಳುವ ಪ್ರಶ್ನೆಯಿಲ್ಲ. ಅಣೆಕಟ್ಟೆಆಸುಪಾಸಿನಲ್ಲಿ ಸರ್ಕಾರದ್ದೇ ಅಂದಾಜು 300 ಎಕರೆ ಜಮೀನಿದೆ. ಯೋಜನೆಗೆ ಅಷ್ಟುಪ್ರಮಾಣದ ಜಮೀನು ಸಾಕಾಗುತ್ತದೆ. ಒಂದು ವೇಳೆ ಅಗತ್ಯ ಬಿದ್ದರೆ ತಮ್ಮ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಯೋಜನೆಗೆ ಬಿಟ್ಟು ಕೊಡುತ್ತೇವೆ. ಅಭಿವೃದ್ಧಿಗಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿದ್ದೇವೆ ಎಂದು ಹೇಳಿದರು.

ಕೆಲವರಿಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿರೋಧವಿದೆ. ಪ್ರತಿಯೊಂದು ಯೋಜನೆಗೂ ಅಡ್ಡಗಾಲು ಹಾಕಲಾಗುತ್ತದೆ ಎನ್ನುವ ಕಳಂಕ ಹೊತ್ತುಕೊಂಡೇ ನಮ್ಮ ಜಿಲ್ಲೆ ಇಂದಿನ ಸ್ಥಿತಿಗೆ ತಲುಪಿದೆ. ತಜ್ಞರ ಸಲಹೆಯಂತೆಯೇ ಯೋಜನೆ ರೂಪಿಸಲಾಗಿದೆ. ಯೋಜನೆ ವಿರೋಧ ಮಾಡುವವರು ಮೊದಲು ಇದನ್ನು ಮನಗಾಣಬೇಕು ಎಂದರು. 

ಅಣೆಕಟ್ಟೆಬಳಿ 30 ಅಡಿ ಗುಂಡಿ ತೋಡಿ, ಕಾವೇರಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಚಾರವೇನಲ್ಲ. ತಾಂತ್ರಿಕ ವರದಿ ಮತ್ತು ತಜ್ಞರ ಒಪ್ಪಿಗೆ ಇಲ್ಲದೆ ಯೋಜನೆ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಬಂದಿಲ್ಲ ಎನ್ನುವುದನ್ನು ವಿರೋಧ ಮಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ವೈಜ್ಞಾನಿಕವಾಗಿಯೇ ಎಲ್ಲವನ್ನೂ ಆಲೋಚನೆ ಮಾಡಿದ್ದೇವೆ ಎಂದರು.