* ದೇಶದ ಸಂಸ್ಕೃತಿ ವಿರೋಧಿಸುವವರು ನೂರಾರು ವರ್ಷ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ಇಂಗ್ಲಿಷ್‌ ಭಾಷೆ* ಇಂಗ್ಲಿಷ್‌ಗೆ ಹಿಂದಿ ಪರ್ಯಾಯ ಅಂತ ಸ್ವೀಕರಿಸಿ: ಸಚಿವ ಜೋಶಿ* ಹಿಂದಿ ಬಳಸಿ ಎಂಬ ಅಮಿತ್‌ ಶಾ ಹೇಳಿಕೆಗೆ ಬೆಂಬಲ

ಬೆಂಗಳೂರು(ಏ.10): ದೇಶದ ಸಂಸ್ಕೃತಿ ವಿರೋಧಿಸುವವರು ನೂರಾರು ವರ್ಷ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ಇಂಗ್ಲಿಷ್‌ ಭಾಷೆಯನ್ನು ಒಪ್ಪುತ್ತಾರೆಯೇ ಹೊರತು ಹಿಂದಿಯನ್ನು ಒಪ್ಪುವುದಿಲ್ಲ. ಈ ಮನಃಸ್ಥಿತಿಯಿಂದ ಹೊರಬಂದು ಹಿಂದಿಯನ್ನು ಇಂಗ್ಲಿಷ್‌ನ ಪರ್ಯಾಯ ಎಂದು ಸ್ವೀಕರಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಎಲ್ಲಾ ರಾಜ್ಯಗಳವರೂ ಹಿಂದಿ ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ‘ಹಿಂದೂಸ್ತಾನ, ಹಿಂದೂ ಸಂಸ್ಕೃತಿ, ಹಿಂದಿ ಎಂದರೆ ಕೆಲವರಿಗೆ ಅಲರ್ಜಿ. ಕೇವಲ ಅಮಿತ್‌ ಶಾ ಹೇಳಿದ್ದಾರೆ ಎಂಬ ಕಾರಣಕ್ಕೆ ಹಿಂದಿ ಬಳಕೆಯನ್ನು ವಿರೋಧಿಸುತ್ತಿದ್ದಾರೆ. ಇದು ಸರಿಯಲ್ಲ, ಹಿಂದಿಯನ್ನು ಸ್ಥಳೀಯ ಭಾಷೆ ಎಂದು ಸ್ವೀಕರಿಸಬೇಡಿ. ಬದಲಿಗೆ ಇಂಗ್ಲಿಷ್‌ಗೆ ಪರ್ಯಾಯ ಎಂದು ಸ್ವೀಕರಿಸಿ. ನಿಮ್ಮ ರಾಜ್ಯದಲ್ಲಿ ನಿಮ್ಮ ಭಾಷೆಯನ್ನು ಮಾತನಾಡಿ’ ಎಂದರು.

ದೇಶಕ್ಕೆ ಇಂಗ್ಲಿಷ್‌ ಬರುವ ಮೊದಲೇ ನಮ್ಮ ದೇಶದಲ್ಲಿ ಹಿಂದಿ ಇತ್ತು. ಇಂದಿಗೂ ದೇಶದ ಶೇ.98ರಷ್ಟುಮಂದಿಗೆ ಇಂಗ್ಲಿಷ್‌ ಬರುವುದಿಲ್ಲ. ಹೀಗಾಗಿ ಅಮಿತ್‌ ಶಾ ಅವರು ಬೇರೆ ಬೇರೆ ಭಾಷೆಗಳನ್ನಾಡುವ ಜನರು ಒಂದೆಡೆ ಸೇರಿದಾಗ ಇಂಗ್ಲಿಷ್‌ ಮಾತನಾಡುವ ಬದಲು ಹಿಂದಿಯನ್ನೇ ಮಾತನಾಡಬೇಕು ಎಂದಿದ್ದಾರೆ ಎಂದು ಸಮರ್ಥನೆ ನೀಡಿದರು.

ಅಮಿತ್‌ ಶಾ ಹೇಳಿದರು ಎಂಬ ಕಾರಣಕ್ಕಾಗಿಯೇ ವಿರೋಧ ಅಲೆ ಎದ್ದಿದೆ. ನಮ್ಮ ದೇಶದ ಸಂಸ್ಕೃತಿಯನ್ನು ವಿರೋಧಿಸುವವರು ನೂರಾರು ವರ್ಷ ನಮ್ಮ ವಿರುದ್ಧ ದಬ್ಬಾಳಿಕೆ ನಡೆಸಿದ ಆಂಗ್ಲ ಭಾಷೆಯನ್ನು ಬೇಕಾದರೆ ನಾವು ಬಳಸುತ್ತೇವೆ. ಆದರೆ, ಹಿಂದಿಯನ್ನು ಒಪ್ಪುವುದಿಲ್ಲ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಷ್ಯಾ, ಜರ್ಮನಿ, ಚೀನಾದಲ್ಲಿ ಎಲ್ಲರಿಗೂ ಇಂಗ್ಲಿಷ್‌ ಬರುವುದಿಲ್ಲ. ಇನ್ನು ಕಾಂಗ್ರೆಸ್‌ ಸರ್ಕಾರದ 67 ವರ್ಷದ ಅವಧಿಯಲ್ಲಿ ತಾಂತ್ರಿಕ ಕೋರ್ಸ್‌ಗಳಿಗೆ ಸ್ಥಳೀಯ ಭಾಷೆ ಪಠ್ಯ ಪುಸ್ತಕ ರಚನೆ ಮಾಡಿಲ್ಲ. ಆದರೆ, ಬಿಜೆಪಿ ಅವಧಿಯಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಸಂಬಂಧಿಸಿದ ಪಠ್ಯ ಪುಸ್ತಕಗಳನ್ನು ಸ್ಥಳೀಯ ಭಾಷೆಯಲ್ಲಿ ತರಲಾಗಿದೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ಹೋಲಿಸಿದರೆ ಇಂಗ್ಲಿಷ್‌ಗೆ ಇತಿಹಾಸ ಕಡಿಮೆ ಎಂದು ಹೇಳಿದರು.