ಜಿಲ್ಲೆಗೊಂದರಂತೆ 31 ಗೋವು ದತ್ತು ಪಡೆದ ಸಚಿವ ಚವ್ಹಾಣ್
ರಾಜ್ಯದಾದ್ಯಂತ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲಿನಲ್ಲಿ 123 ಗೋಶಾಲೆಗಳು ನೋಂದಣಿ
ಬೆಂಗಳೂರು(ಜು.29): ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿನ ಒಟ್ಟು 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಪುಣ್ಯಕೋಟಿ ದತ್ತು ಯೋಜನೆಯ ಪೋರ್ಟಲ್‌ಗೆ ಚಾಲನೆ ನೀಡಿದರು. ಈ ಸುದಿನದಂದು 31 ಗೋವುಗಳನ್ನು ದತ್ತು ಪಡೆದು ಅದರ ಪಾಲನೆ, ಪೋಷಣೆ ಮತ್ತು ಆರೈಕೆಗೆ ಸಹಕರಿಸಲು ಮುಂದಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದು ಹೇಳಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 100 ಗೋವುಗಳನ್ನು ನನ್ನನ್ನು ಒಳಗೊಂಡಂತೆ ಸಾರ್ವಜನಿಕರು ದತ್ತು ಪಡೆದಿದ್ದಾರೆ. ಗೋಶಾಲೆಗಳಿಗೆ 1314 ಜನ ದೇಣಿಗೆ ನೀಡಿದ್ದಾರೆ. ರಾಜ್ಯದಾದ್ಯಂತ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲಿನಲ್ಲಿ 123 ಗೋಶಾಲೆಗಳು ನೋಂದಣಿಯಾಗಿದ್ದು, 60 ಗೋಶಾಲೆಗಳ ನೋಂದಣಿ ಪ್ರಗತಿಯಲ್ಲಿದೆ. 16650 ಜಾನುವಾರುಗಳನ್ನು ನೊಂದಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಿರಿಯ ಪಶು ವೈದ್ಯರ ನೇಮಕ ಶೀಘ್ರ: ಸಚಿವ ಪ್ರಭು ಚವ್ಹಾಣ್
ದಿನೇ ದಿನೇ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಸಾರ್ವಜನಿಕರ ಸಹಕಾರದಿಂದ ಯಾವುದೇ ಅಡಚಣೆಯಿಲ್ಲದೇ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ. ವಯಸ್ಸಾದ, ರೋಗಗ್ರಸ್ಥ, ನಿರ್ಗತಿಕ, ನಿಶ್ಯಕ್ತ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು, ನ್ಯಾಯಾಲಯ ಹಾಗೂ ಪೊಲೀಸ್ ಕಸ್ಟಡಿಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುವುದು ಎಂದು ಸಚಿವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.