ಕನ್ನಡ ನಾಮಫಲಕಗಳನ್ನು ಯಾರೇ ಆಗಲಿ ಅಭಿಮಾನದಿಂದ ಹಾಕಬೇಕು. ಕನ್ನಡಪರ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ವಿಡಿಯೋಗಳನ್ನು ನೋಡಿದರೆ ವಿದೇಶದಿಂದ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ 

ಬೆಂಗಳೂರು(ಡಿ.31): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿಯವರ ಎಲ್ಲಾ ದೌರ್ಬಲ್ಯಗಳೂ ಗೊತ್ತಿದ್ದಂತಿದೆ. ಕಳೆದ 5 ವರ್ಷದಲ್ಲಿ ಯತ್ನಾಳ್‌ ಹೇಳಿದ್ದೆಲ್ಲಾ ಸತ್ಯವಾಗಿದೆ. ಹೀಗಾಗಿಯೇ ಯತ್ನಾಳ್‌ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದರಿಂದ ಬಿಜೆಪಿ ಎಷ್ಟು ದುರ್ಬಲ ಎಂಬುದು ಸಾಬೀತಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಕಾಂಗ್ರೆಸ್‌ ಏಜೆಂಟ್‌ ಎಂಬುದು ಸುಳ್ಳು. ಒಂದು ವೇಳೆ ಅವರು ಕಾಂಗ್ರೆಸ್ ಏಜೆಂಟ್‌ ಆಗಿದ್ದರೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯವನ್ನು ಪ್ರಶ್ನಿಸಿದರು.

ಬಿಜೆಪಿಯವರು ಅವರ ಮೇಲೆ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿರುವುದು ನೋಡಿದರೆ ಯತ್ನಾಳ್‌ ಬಳಿ ಎಲ್ಲಾ ದಾಖಲೆ ಇದ್ದಂತಿದೆ. ಈ ಬಗ್ಗೆ ಸರ್ಕಾರ ಕೂಡ ತನಿಖೆ ಮಾಡುತ್ತಿದೆ. ಕೊರೋನಾ ವೇಳೆ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪ ಸೇರಿದಂತೆ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದರು.

ವೀರಶೈವ ಅಧಿವೇಶನ ಬಗ್ಗೆ ಅಸಮಾಧಾನ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

ಗಲಾಟೆ ಮಾಡಿದರೆ ಹೂಡಿಕೆಗೆ ಅಡ್ಡಿ: ಎಂಬಿಪಾ

ಬೆಂಗಳೂರು: ಕನ್ನಡ ನಾಮಫಲಕಗಳನ್ನು ಯಾರೇ ಆಗಲಿ ಅಭಿಮಾನದಿಂದ ಹಾಕಬೇಕು. ಕನ್ನಡಪರ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ವಿಡಿಯೋಗಳನ್ನು ನೋಡಿದರೆ ವಿದೇಶದಿಂದ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಈಗ ನಡೆಯುತ್ತಿರುವುದೆಲ್ಲಾ ವೈರಲ್ ಆಗಿ ವಿದೇಶಗಳಿಗೆ ಹೋದರೆ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ. ಹೀಗಾಗಿ ಅಂಗಡಿಕಾರರೇ ಕನ್ನಡ ನಾಡಲ್ಲಿ ಇದ್ದೇವೆ ಎಂದು ಅಭಿಮಾನದಿಂದ ನಾಮಫಲಕಗಳನ್ನು ಹಾಕಬೇಕು ಎಂದರು.
ಕೈಗಾರಿಕಾ ಇಲಾಖೆಯಲ್ಲಿ ಬಂಡವಾಳ ಆಕರ್ಷಣೆಗೆ ಭಾರೀ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಯಾರಿಗೂ ಯಾವ ರಾಜ್ಯ, ದೇಶವೂ ಅನಿವಾರ್ಯವಲ್ಲ. ಇದನ್ನು ಕನ್ನಡಪರ ಸಂಘಟನೆಯವರೂ ಅರ್ಥ ಮಾಡಿಕೊಳ್ಳಬೇಕು ಎಂದರು.