Asianet Suvarna News Asianet Suvarna News

ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ

* ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ
* ತಡೆ ನೀಡಿ ಆದೇಶ ಹೊರಡಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ
* ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಾಗೆ ನೆರವು ನೀಡುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು

Minister kota srinivas poojary orders to Stop Hindu Temples fund Using mosque-madrasa
Author
Bengaluru, First Published Jun 9, 2021, 7:09 PM IST

ಬೆಂಗಳೂರು, (ಜೂನ್.09): ರಾಜ್ಯದ ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆಗೆ ತಡೆ ನೀಡಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆದೇಶ ಹೊರಡಿಸಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡದ್ದಾರೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಾಗೆ ನೆರವು : ವ್ಯಾಪಕ ವಿರೋಧ

ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ, ಮದ್ರಸಾಗಳಿಗೆ ತಸ್ತಿಕ್ ಭತ್ಯೆ ನೀಡಲು ಸೂಚಿಸಿದ್ದಾರೆಂದು ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಗಂಭೀರ ಆರೋಪ ಮಾಡಿತ್ತು. ಬಳಿಕ ಇದರ ವಿರುದ್ಧ ರಾಜ್ಯಾದ್ಯಂತ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಈ ಕುರಿತು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಮಾಧ್ಯಮದ ಮೂಲಕ ಹೇಳಿಕೆಯೊಂದನ್ನು ಹೊರಡಿಸಿದ್ದು, ರಾಜ್ಯದಲ್ಲಿ ನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಕೂಡ  ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದಾರೆ. 

ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ 27ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರಕಾರ ವಾರ್ಷಿಕ ಅನುದಾನ  ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios