ಬೆಂಗಳೂರು(ಜು.18): ಕೊರೋನಾ ನಿಯಂತ್ರಣ ಸಲುವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹಗಲು-ಇರುಳು ಕಾರ್ಯಪ್ರವೃತ್ತರಾಗಿದ್ದು ಶುಕ್ರವಾರ ತಡರಾತ್ರಿ ದಢೀರನೇ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್‌ಗಳ ಗುಣಮಟ್ಟ, ಕೊರೋನಾ ಸೋಂಕಿತರ ಆರೈಕೆ, ಶುಚಿತ್ವ, ಸಿಬ್ಬಂದಿಯ ಹಾಜರಾತಿ ಪರಿಶೀಲನೆ ನಡೆಸಿದರು.

"

ಪ್ರತಿಯೊಂದು ವಿಭಾಗದಲ್ಲೂ ಕೆ.ಸಿ.ಜನರಲ್‌ ಆಸ್ಪತ್ರೆಯ ವೈಫಲ್ಯಗಳನ್ನು ಎಳೆ-ಎಳೆಯಾಗಿ ಪರಿಶೀಲಿಸಿದ ಡಾ. ಕೆ.ಸುಧಾಕರ್‌ ಅವರಿಗೆ ಆಸ್ಪತ್ರೆಯಲ್ಲಿನ ನಿರ್ವಹಣೆಯ ವೈಫಲ್ಯ ಹಾಗೂ ಅವ್ಯವಸ್ಥೆಗಳನ್ನು ತಾವಾಗಿಯೇ ಬಯಲಿಗೆಳೆದರು.

ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ

ಆಸ್ಪತ್ರೆಯಲ್ಲಿ 35 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದರಿಂದ ಅನುಮಾನಗೊಂಡ ಡಾ. ಕೆ.ಸುಧಾಕರ್‌ ಪಿಪಿಇ ಕಿಟ್‌, ಫೇಸ್‌ಶೀಲ್ಡ್‌ ಹಾಗೂ ಮಾಸ್ಕ್‌ ತರಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಎನ್‌-95 ಮಾಸ್ಕ್‌ ಬದಲಿಗೆ ಬೇರೆ ಮಾಸ್ಕ್‌ ಪೂರೈಸಲಾಗಿತ್ತು.

ಇದಕ್ಕೆ ತೀವ್ರ ಗರಂ ಆದರ ಸುಧಾಕರ್‌, ಸುರಕ್ಷತಾ ಸಾಮಗ್ರಿ ಗುಣಮಟ್ಟದ್ದು ನೀಡದಿದ್ದರೆ ವೈದ್ಯರಿಗೆ, ಶುಶ್ರೂಷಕರಿಗೆ, ಸಿಬ್ಬಂದಿಗೆ ಕೊರೋನಾ ಸೋಂಕು ತಗುಲದೆ ಇರುತ್ತದೆಯೇ? 95 ಜಿಎಸ್‌ಎಂ ಮಾನದಂಡ ಇರಬೇಕಿದ್ದ ಪಿಪಿಇ ಕಿಟ್‌ನಲ್ಲಿ 65 ಜಿಎಸ್‌ಎಂ ವಸ್ತುಗಳನ್ನು ಪೂರೈಸಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ನಿವಾಸಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಗುಣಮಟ್ಟದ ಪಿಪಿಇ ಕಿಟ್‌ ಪೂರೈಸಿಲ್ಲ, ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆಯಿರಿ ಎಂದು ಅ​ಧಿಕಾರಿಗಳಿಗೆ ಸೂಚಿಸಿದರು.