*  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ*  ಕೊರೋನಾ ನಂತರ 4 ಸಾವಿರ ವೈದ್ಯರು ಕರ್ತವ್ಯಕ್ಕೆ*  ವೈದ್ಯರು ವೃತ್ತಿಪರರಾಗಿದ್ದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ

ಬೆಂಗಳೂರು(ಜು.02): ವೈದ್ಯರ ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಇಂತಹ ವೃತ್ತಿಯನ್ನು ಸಮರ್ಪಣಾ ಮನೋಭಾವದಿಂದ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣದಿಂದ ವೈದ್ಯರ ಸೇವೆಯನ್ನು ಅಳೆಯಲು ಸಾಧ್ಯವಿಲ್ಲ. ವೈದ್ಯರು ವೃತ್ತಿಪರರಾಗಿದ್ದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ. ವೈದ್ಯರು ಕೇವಲ ಔಷಧಿ ಮಾತ್ರ ಕೊಡುವುದಿಲ್ಲ, ಬದಲಾಗಿ ರೋಗಿಯನ್ನು ಅಂತಃಕರಣದಿಂದ ಆರೈಕೆ ಮಾಡುತ್ತಾರೆ. ಎಂದಿಗೂ ವೈದ್ಯರು ಸಮರ್ಪಣೆಯಿಂದ ಕೆಲಸ ಮಾಡಬೇಕೆ ಹೊರತು, ಟೈಮ್‌ಪಾಸ್‌ ಅಥವಾ ಪರ್ಯಾಯ ಎಂದು ಭಾವಿಸಬಾರದು ಎಂದರು.

ಕೊರೋನಾ ಹೆಚ್ಚಾದರೆ ಕಾಂಗ್ರೆಸ್ಸೇ ನೇರ ಹೊಣೆ: ಸಚಿವ ಸುಧಾಕರ್‌

ವೈದ್ಯರಿಗೆ ಪ್ರತಿದಿನದ ಕಲಿಕೆ ಮುಖ್ಯ. ವೈದ್ಯರು ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಸಂಜೆ ಖಾಸಗಿ ಪ್ರಾಕ್ಟಿಸ್‌ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೆಲ ವೈದ್ಯರು ಮಾಡುವ ಮೌಲ್ಯ ರಹಿತ ಕಾರ್ಯಗಳಿಂದ ಇಡೀ ವೈದ್ಯಲೋಕಕ್ಕೆ ಕೆಟ್ಟಹೆಸರು ಬರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ವೈದ್ಯರ ಕೊರತೆ ಇಲ್ಲ. ಆದರೆ ಕೆಲ ವೈದ್ಯರಿಂದ ಹಾಜರಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಾಗಾಗಿದೆ. ವೈದ್ಯರ ಮೇಲೆ ಯಾರೂ ನಿಗಾ ಇಡಬಾರದು. ವೈದ್ಯರನ್ನು ಅನುಮಾನದಿಂದ ನೋಡಿದರೆ ಆ ವೃತ್ತಿಗೆ ಅಪಮಾನವಾಗುತ್ತದೆ. ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಬಹಳ ನೋವಿನಿಂದ ಜಾರಿ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೋನಾ ನಂತರ 4 ಸಾವಿರ ವೈದ್ಯರು ಕರ್ತವ್ಯಕ್ಕೆ

10 ವರ್ಷದಲ್ಲಿ ಆಗುವಂತಹ ಬೆಳವಣಿಗೆ ಕೊರೋನಾ ಬಳಿಕ ಒಂದು ವರ್ಷದಲ್ಲಿ ಆಗಿದೆ. 2020ಕ್ಕೆ ಹೋಲಿಸಿದರೆ ಈಗ ಹೆಚ್ಚುವರಿಯಾಗಿ 4,000 ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೈದ್ಯರ ಮೇಲೆ ಯಾರೇ ಹಲ್ಲೆ ಮಾಡಿದರೂ ಅದು ಅಕ್ಷಮ್ಯ ಅಪರಾಧ. ವೈದ್ಯರ ಮೇಲೆ ಹಲ್ಲೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನು ಡಾ.ಬಿ.ಸಿ.ರಾಯ ಜನ್ಮಶತಮಾನೋತ್ಸವದ ಅಂಗವಾಗಿ ಇಡೀ ದೇಶದಲ್ಲಿ ವೈದ್ಯರ ದಿನಾಚರಣೆ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡ ಅರ್ಥಪೂರ್ಣ ಆಚರಣೆಗೆ ಸಿದ್ಧವಾಗಿದೆ. ಜುಲೈ 7 ರಂದು ವಿಧಾನಸೌಧದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಹಾಗೂ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಶುಲ್ಕ ವಸೂಲಿ ಮಾಡಿ ರೋಗಿಗಳಿಗೆ ಹಿಂದಿರುಗಿಸಲಾಗುತ್ತದೆ. ಕೊರೊನಾ ಸಮಯದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗಿ ಮತ್ತು ಸರ್ಕಾರ ಎರಡೂ ಕಡೆಯಿಂದಲೂ ಹಣ ಪಡೆದಿವೆ. ಅಂತಹ ಆಸ್ಪತ್ರೆಗಳಿಗೆ ನೋಟಿಸ್‌ ನೀಡಿ ಹಣ ವಸೂಲಿ ಮಾಡಿ, ರೋಗಿಗಳ ಕುಟುಂಬಕ್ಕೆ ಹಣ ವಾಪಸ್‌ ಕೊಡಿಸಲಾಗುವುದು. ಇನ್ನು ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಮಾಸ್ಕ್‌ ಧರಿಸಬೇಕು. ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ತಿಳಿಸಿದರು.