Asianet Suvarna News Asianet Suvarna News

ಕೊರೋನಾ 3ನೇ ಅಲೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುಧಾಕರ್‌

* 2ನೇ ಅಲೆಯಲ್ಲಾದ ವೈಫಲ್ಯ 3ನೇ ಅಲೆಯಲ್ಲಾಗದು
* ಎಲ್ಲ ಜಿಲ್ಲೆಯಲ್ಲೂ ವೈದ್ಯರು, ಸಿಬ್ಬಂದಿಗೆ ತರಬೇತಿ
* ಪ್ರತಿ ತಿಂಗಳು 1.5 ಕೋಟಿ ಲಸಿಕೆ ವಿತರಣೆ ಗುರಿ

Minister Dr K Sudhakar Talks Over Corona 3rd Wave in Karnataka grg
Author
Bengaluru, First Published Jul 17, 2021, 7:23 AM IST

ಬೆಂಗಳೂರು(ಜು.17): ಮೊದಲ ಅಲೆ ನಿಯಂತ್ರಿಸಲು ಯಶಸ್ವಿಯಾಗಿದ್ದ ನಾವು 2ನೇ ಅಲೆಯಲ್ಲಿ 7 ಪಟ್ಟು ಮೂಲಸೌಕರ್ಯ ಹೆಚ್ಚಳ ಮಾಡಿ 4 ಸಾವಿರ ವೈದ್ಯರ ನೇಮಕ ಮಾಡಿದರೂ ನಿರೀಕ್ಷೆಗೂ ಮೀರಿ ಸಾವು-ನೋವು ಸಂಭವಿಸಿತ್ತು. 3ನೇ ಅಲೆಯಲ್ಲಿ ಈ ರೀತಿ ಆಗದಂತೆ ಎಲ್ಲಾ ಸಿದ್ಧತೆ ನಡೆಸುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ ಕೊರೋನಾ ನಿರ್ವಹಣೆಗಾಗಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲಾ ವೈದ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. 18 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸೋಂಕು ತಗಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮಧ್ಯಮ, ಹಿರಿಯ ವಯಸ್ಸಿನವರಿಗೆ ನೀಡುವ ಚಿಕಿತ್ಸೆಯನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಈ ವಯೋಮಾನದವರಿಗೆ ಸೋಂಕು ಬಂದರೆ ಮಕ್ಕಳ ತಜ್ಞರ ಬಳಿಯೇ ಹೋಗಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ತಜ್ಞರು ತರಬೇತಿ ನೀಡುತ್ತಿದ್ದು ಇದನ್ನು ದಾಖಲಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ತರಬೇತಿಯನ್ನು ವಿಡಿಯೋ ರೆಕಾರ್ಡ್‌ ಮಾಡಿ ಎಲ್ಲ ವೈದ್ಯರಿಗೂ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಡಾ. ದೇವಿಶೆಟ್ಟಿಸಮಿತಿ ಮೂರನೇ ಅಲೆ ಸಿದ್ಧತೆಗೆ ವರದಿ ನೀಡಿದ್ದು, ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮುಂದಿನ ತಿಂಗಳು ಲಸಿಕೆಗೆ ರಾಜ್ಯದಲ್ಲಿ ತೀವ್ರ ಅಭಾವ?

ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಿದ್ದು, ಮುಂದುವರಿದ ದೇಶಗಳು ಕೂಡ ಎಡವಿರುವುದು ನಿಜ. ಮೊದಲ ಅಲೆಯಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಎರಡನೇ ಅಲೆಗೆ ಮುನ್ನ ಮೂಲಸೌಕರ್ಯ ಹೆಚ್ಚಿಸಲಾಗಿದೆ. 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ. ಆದರೂ ನಿರೀಕ್ಷೆಗೂ ಮೀರಿ ಸಾವು-ನೋವು ಉಂಟಾಗಿತ್ತು. ಹೀಗಾಗಿ ಮೂರನೇ ಅಲೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಆರೈಕೆಗೆ ವಿಶೇಷ ವಿಭಾಗ ಮಾಡುತ್ತಿದ್ದೇವೆ ಎಂದರು.

ಮೈ ಮರೆತರೆ ಅಪಾಯ:

ಹಲವು ದೇಶಗಳಲ್ಲಿ ಈಗಾಗಲೇ 3ನೇ ಅಲೆ ಬಂದಿದೆ. ಮೈ ಮರೆತರೆ ಮೂರನೇ ಅಲೆಯ ಅಪಾಯವನ್ನು ನಾವೇ ಮೈ ಮೇಲೆ ಎಳೆದುಕೊಂಡಂತೆ ಆಗಲಿದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಕನಿಷ್ಠ ಶೇ.70ರಷ್ಟುಜನಸಂಖ್ಯೆಗೆ ಲಸಿಕೆ ನೀಡುವವರೆಗೂ ಎಚ್ಚರ ಅಗತ್ಯ. ಕೇರಳ, ಮಹಾರಾಷ್ಟ್ರ ಗಡಿ ಹಂಚಿಕೊಳ್ಳುವುದರಿಂದ ಕೊರೋನಾ ಬಗ್ಗೆ ಎಚ್ಚರವಾಗಿರಬೇಕು. ಸೋಂಕು ಇನ್ನೂ ಇರುವುದರಿಂದ ಸುರಕ್ಷತಾ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿ ತಿಂಗಳು 1.5 ಕೋಟಿ ಲಸಿಕೆ ವಿತರಣೆ ಗುರಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂವಾದ ನಡೆಸಿದ್ದು, ದಿನಕ್ಕೆ 5 ಲಕ್ಷ ಡೋಸ್‌ನಂತೆ ತಿಂಗಳಿಗೆ 1.5 ಕೋಟಿ ಡೋಸ್‌ ಲಸಿಕೆ ಪೂರೈಸಲು ಮವನಿ ಮಾಡಿದ್ದಾರೆ. ಮುಂದೆ ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಡೋಸ್‌ ಲಸಿಕೆ ನೀಡುವ ಗುರಿ ಇದೆ. ಈ ತಿಂಗಳಲ್ಲೇ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ ಎಂದರು.
 

Follow Us:
Download App:
  • android
  • ios