ಬೆಂಗಳೂರು(ಡಿ.25): ರಾಜ್ಯದಲ್ಲಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ, 12ರಿಂದ 20 ಹಾಸಿಗೆಗಳ ವ್ಯವಸ್ಥೆ, ಪ್ರತ್ಯೇಕ ಆ್ಯಂಬುಲೆನ್ಸ್‌, ವೈದ್ಯರು ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಹಂತ ಹಂತವಾಗಿ ಕಲ್ಪಿಸುವ ಮೂಲಕ ಮೇಲ್ದರ್ಜೆಗೇರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರು ಈ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

"

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್‌, ರಾಜ್ಯದಲ್ಲಿನ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಂತ-ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು.ಪ್ರಸ್ತುತ ಕೇರಳ ಹಾಗೂ ತಮಿಳುನಾಡು ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದು, ಈ ಸ್ಥಾನಕ್ಕೆ ರಾಜ್ಯ ತಲುಪಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕನಸಾಗಿದೆ ಎಂದರು.

ಯೋಜನೆಯ ಭಾಗವಾಗಿ ಇನ್ನು ಮುಂದೆ ನಿರ್ಮಾಣಗೊಳ್ಳುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ ಎರಡು ಎಕರೆ ಜಾಗ ಇರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಆಡಳಿತ ವಿಭಾಗ, ಚಿಕಿತ್ಸಾ ವಿಭಾಗ, ಒಳರೋಗಿ ವಿಭಾಗ, ತಾಯಿ ಮತ್ತು ಶಿಶು ಕಾಳಜಿ ಕೇಂದ್ರ ಇರಲಿದೆ. ಪ್ರಸ್ತುತ ಇರುವ ಆರು ಹಾಸಿಗೆಗಳ ಪ್ರಮಾಣವನ್ನು 12 ರಿಂದ 20ಕ್ಕೆ ಏರಿಕೆ ಮಾಡಲಾಗುವುದು. ಅದೇ ರೀತಿ ಪ್ರಸ್ತುತ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಿದ್ದು 3-4 ಮಂದಿಯನ್ನು ನೇಮಿಸಲಾಗುವುದು. ಇದರಲ್ಲಿ ತಲಾ ಒಬ್ಬರು ಆಯುಷ್‌ ವೈದ್ಯರು ಹಾಗೂ ಮಹಿಳಾ ವೈದ್ಯರು ಕಡ್ಡಾಯವಾಗಿರುತ್ತಾರೆ. ಉಳಿದಂತೆ ಪ್ರಯೋಗಾಲಯ, ವೈದ್ಯರು, ಶ್ರುಶ್ರೂಷಕರು, ಆರೋಗ್ಯ ಸಿಬ್ಬಂದಿಗೆ ವಸತಿ ವ್ಯವಸ್ಥೆ ಸೇರಿ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲು 6-8 ಕೋಟಿ ರು. ವೆಚ್ಚವಾಗುತ್ತದೆ ಎಂದು ವಿವರಿಸಿದರು.

ಸಂಪುಟ ವಿಸ್ತರಣೆ: ವಲಸಿಗರಿಗೆ ಸಚಿವ ಸ್ಥಾನ ಸಿಗುವ ಸಂಭವ

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರ್ವಜನಿಕರಿಗೆ ಭವಿಷ್ಯದ ಅನಾರೋಗ್ಯ ಸಮಸ್ಯೆಗಳನ್ನು ಎಚ್ಚರಿಸುವ ಹಂತಕ್ಕೆ ಕೊಂಡೊಯ್ಯಲಾಗುವುದು. 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ವರ್ಷಕ್ಕೆ ಎರಡು ಬಾರಿಯಾದರೂ ಸಂಪೂರ್ಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೃದಯಾಘಾತ ಸಂಭವಿಸುವುದಾದರೆ ಮೊದಲೇ ಎಚ್ಚರಿಸುವಂತಿರಬೇಕು ಎಂದು ಡಾ.ಕೆ. ಸುಧಾಕರ್‌ ಹೇಳಿದರು.

ಮುಂದಿನ ಬಜೆಟ್‌ನಲ್ಲಿ ಹಣ: ಸಿಎಂ

ಸಭೆ ಬಳಿಕ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಪ್ರತಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನೂ ಮೇಲ್ದರ್ಜೆಗೇರಿಸುವ ಮೂಲಕ ದಿನದ 24 ಗಂಟೆಯೂ ಆರೋಗ್ಯ ಸೇವೆ ದೊರೆಯುವಂತೆ ಮಾಡಲಾಗುವುದು. ಪ್ರತಿ 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಸ್ತಿತ್ವದಲ್ಲಿದೆ. ಈ ಕೇಂದ್ರಗಳಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಮುದಾಯ, ತಾಲೂಕು, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ

ಪ್ರತಿ 80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯದ ಚಿಕಿತ್ಸಾ ಕೇಂದ್ರವನ್ನು 1.5ರಿಂದ 2 ಲಕ್ಷ ಜನಸಂಖ್ಯೆಗೆ ಇರುವ ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾಸ್ಪತ್ರೆಗಳನ್ನು 200ರಿಂದ 700 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿ ಜಿಲ್ಲಾ ಹಂತದಲ್ಲೇ ಟ್ರಾಮಾ, ಕ್ಯಾನ್ಸರ್‌, ಕಾರ್ಡಿಯಾಲಜಿ ವಿಭಾಗ ತೆರೆಯಲಾಗುವುದು. ಈ ಮೂಲಕ ಅನಗತ್ಯವಾಗಿ ಬೆಂಗಳೂರು, ಹುಬ್ಬಳಿಗೆ ಹೋಗುವುದನ್ನು ತಪ್ಪಿಸಲಾಗುವುದು ಎಂದು ಡಾ.ಕೆ. ಸುಧಾಕರ್‌ ಹೇಳಿದರು.

ಇ-ಆಸ್ಪತ್ರೆ ಮೂಲಕ ಸಂಪರ್ಕ

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಅಂತರ್ಜಾಲ ಸಂಪರ್ಕದೊಂದಿಗೆ ಬೆಸೆಯಲಾಗುವುದು. ಎಲ್ಲ ಆಸ್ಪತ್ರೆಗಳಿಗೆ ಇ-ಆಸ್ಪತ್ರೆ ಸೌಲಭ್ಯ ಕಲ್ಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿರುವ ಪರೀಕ್ಷೆಯ ವರದಿಯು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೇರವಾಗಿ ಲಭ್ಯವಾಗುವಂತೆ ಮಾಡಲಾಗುವುದು. ತಜ್ಞ ವೈದ್ಯರ ತಪಾಸಣೆಗೆ ಅನುಕೂಲವಾಗಲು ಉತ್ತಮ ಗುಣಮಟ್ಟದ ಕ್ಯಾಮರಾ ಮತ್ತು ಟಿ.ವಿ.ಯೊಂದಿಗೆ ಟೆಲಿ-ಮೆಡಿಸಿನ್‌ ವ್ಯವಸ್ಥೆ ಇರಲಿದೆ ಹಾಗೂ ಎಲ್ಲ ಆರೋಗ್ಯ ಸೇವೆಗಳನ್ನೂ 104 ಹಾಗೂ 108 ಎರಡೂ ಸಹಾಯವಾಣಿಗೆ ಲಿಂಕ್‌ ಮಾಡಲಾಗುವುದು ಎಂದು ಸಚಿವ ಡಾ. ಸುಧಾಕರ್‌ ತಿಳಿಸಿದರು.