ಬೆಂಗಳೂರು(ಜೂ.24): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ಮತ್ತು ಸೌಲಭ್ಯದಲ್ಲಿ ಯಾವುದೇ ಲೋಪ ಕಂಡು ಬಂದರೆ ಆಯಾ ಆಸ್ಪತ್ರೆಯ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ರೋಗಿಗಳಿಗೆ ಕಳಪೆ ಆರೈಕೆ ಹಾಗೂ ಆಹಾರ ನೀಡಲಾಗುತ್ತಿದೆ ಎಂಬ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸುಮಾರು ನಾಲ್ಕು ತಾಸಿನಷ್ಟುಸುದೀರ್ಘ ಕಾಲ ವಿಡಿಯೋ ಸಂವಾದ ನಡೆಸಿದ ಸುಧಾಕರ್‌ ಅವರು ಈ ಎಚ್ಚರಿಕೆ ನೀಡಿದ್ದಾರೆ. ತಮ್ಮ ತಂದೆ, ಪತ್ನಿ ಮತ್ತು ಪುತ್ರಿಗೆ ಕೊರೋನಾ ಸೋಂಕು ತಗುಲಿದ್ದ ಒತ್ತಡದ ನಡುವೆಯೇ ಹಾಗೂ ತಾವು ಸ್ವತಃ ಕ್ವಾರಂಟೈನ್‌ಗೆ ಒಳಗಾಗಿರುವ ಸುಧಾಕರ್‌ ಕರ್ತವ್ಯಪರತೆ ತೋರಿದ ಪರಿಯಿದು.

ರೋಗಿಗಳ ನರಳಾಟ: ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್​ಗೆ ಆಸ್ಪತ್ರೆ ಮುಖ್ಯಸ್ಥರು ಥಂಡಾ

ಲೋಪ ಮರುಕಳಿಸಬಾರದು:

ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಗೂ ಕೋವಿಡ್‌ ಆಸ್ಪತ್ರೆಯ ನಿರ್ದೇಶಕರೊಂದಿಗೆ ಸಂವಾದ ನಡೆಸಿದ ಅವರು, ರೋಗಿಗಳನ್ನು ದಾಖಲು ಮಾಡಿಕೊಳ್ಳುವಲ್ಲಿನ ಗೊಂದಲಗಳು, ಕಳಪೆ ಆಹಾರ ವಿತರಣೆ, ಸ್ವಚ್ಛತೆ ಕಾಪಾಡಿಕೊಳ್ಳದ ಸಂಬಂಧ ಕಳೆದ ಮೂರು ದಿನಗಳಿಂದ ದೂರುಗಳು ಬರುತ್ತಿವೆ. ಕೊರೋನಾ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಲೋಪಗಳು ಮುಂದುವರೆದರೆ ಆಯಾ ಆಸ್ಪತ್ರೆಗಳ ನಿರ್ದೇಶಕರುಗಳನ್ನು ಹೊಣೆ ಮಾಡಲಾಗುವುದು. ಅಷ್ಟೇ ಅಲ್ಲ, ಇಂತಹ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾಯಿಸಿ ಆ ಹೊಣೆಯನ್ನು ಹಿರಿಯ ಕೆಎಎಸ್‌ ಅಧಿಕಾರಿಗೆ ನೀಡಲಾಗುವುದು ಎಂಬ ಗಂಭೀರ ಎಚ್ಚರಿಕೆ ನೀಡಿದರು.

ಚಿಕಿತ್ಸೆ ನೀಡಲು ತಜ್ಞ ಮತ್ತು ಹಿರಿಯ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ತಜ್ಞರು, ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಾರ್ಡ್‌, ಐಸಿಯು ಮುಂದೆ ಪ್ರಕಟಣಾ ಫಲಕದಲ್ಲಿ ಹಾಕಬೇಕು. ಜೊತೆಗೆ ಕ್ಯಾಮೆರಾ ಅಳವಡಿಸಿ ಕರ್ತವ್ಯಕ್ಕೆ ಹಾಜರಾಗುವವರು ತಮ್ಮ ಹೆಸರು ಹೇಳಿ ಒಳ ಹೋಗಬೇಕು. ಒಳಗೆ ಮತ್ತು ಹೊರಗೆ ಹೋಗುವ ಮುನ್ನ ಕಡ್ಡಾಯವಾಗಿ ಸಮಯ ನಮೂದಿಸಿ ಸಹಿ ಮಾಡಲೇಬೇಕು. ಈ ವ್ಯವಸ್ಥೆ ಬುಧವಾರ ಜಾರಿಯಾಗಬೇಕು ಎಂದು ಸೂಚಿಸಿದರು.

ಕೊರೋನಾ ಕಾರ್ಯಚಟುವಟಿಕೆಗಳಿಗೆ ನೀಯೋಜಿಸಿರುವ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳ ಮುಖ್ಯಸ್ಥರು, ಕಾರ್ಯದರ್ಶಿ, ಅಪರ ಮುಖ್ಯಕಾರ್ಯದರ್ಶಿಯವರೊಂದಿಗೆ ಸಮನ್ವಯ ಕಾಪಾಡೊಕೊಳ್ಳಬೇಕು. ಆಯಾ ದಿನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಸೂಚನೆಗಳನ್ನು ಪಾಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೋವಿಡ್‌ ಕೇರ್‌ ಸೆಂಟರ್‌ಗಳು, ಅಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗಳಿಂದ ಆಂಬ್ಯುಲೆನ್ಸ್‌ ಅಥವಾ ಸರ್ಕಾರಿ ಬಸ್‌ಗಳ ಮೂಲಕ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು.

ತಂದೆ ಬೆನ್ನಲ್ಲೇ ಸಚಿವ ಸುಧಾಕರ್ ಹೆಂಡತಿ, ಮಗಳಿಗೆ ಕೊರೋನಾ ಸೋಂಕು ದೃಢ!

ರೋಗ ಲಕ್ಷಣಗಳಿದ್ದು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಮಾತ್ರವೇ ಕೋವಿಡ್‌ ಆಸ್ಪತ್ರೆಗಳಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಕಳುಹಿಸಿ ನಿಗಾ ವ್ಯವಸ್ಥೆ ಮಾಡಬೇಕು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲು ಇರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೋವಿಡ್‌ ಕೇರ್‌ ಸೆಂಟರ್‌ಗಳು, ಅಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.