ಬೆಂಗಳೂರು(ಜು.17):  ಕೊರೋನಾ ಸೋಂಕಿತರಿಗೆ ಹಾಸಿಗೆ ನೀಡದೇ ಖಾಲಿ ಇರಿಸಿಕೊಂಡ, ಹೆಚ್ಚಿನ ಪ್ರಮಾಣದಲ್ಲಿ ಗಂಟಲು ದ್ರವ ಸಂಗ್ರಹ ಮಾಡದ ಲೋಪ ಎಸಗಿದ ಬೆಂಗಳೂರಿನ ಇಂದಿರಾನಗರದ ಸಿ.ವಿ.ರಾಮನ್‌ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷರು ಹಾಗೂ ಸಿಬ್ಬಂದಿಗಳ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಅಪರ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌-19 ಚಿಕಿತ್ಸೆ ನೀಡುವ ನಗರದ ಇಂದಿರಾನಗರದ ಸಿ.ವಿ. ರಾಮನ್‌ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಿಢೀರ್‌ ಭೇಟಿ ನೀಡಿದ ವೇಳೆ ಆಸ್ಪತ್ರೆಯಲ್ಲಿ ಕಂಡು ಬಂದ ಲೋಪ-ದೋಷಗಳಿಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ನೇಮಕ!

15 ಬೆಡ್‌ ಇದ್ರೂ ಇಬ್ಬರೇ ದಾಖಲು: ಸಚಿವರು ಆಸ್ಪತ್ರೆಯ ಐಸಿಯು, ವಾರ್ಡ್‌ಗಳ ಶುಚಿತ್ವ, ಊಟದ ವ್ಯವಸ್ಥೆ, ಕೊರೋನಾ ಪರೀಕ್ಷೆಯ ವಿಧಿವಿಧಾನ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳ ಬಗ್ಗೆ ಮಾಹಿತಿ ಪಡೆದರು. 15 ಹಾಸಿಗೆಗಳಿಗೆ ಹೈಫೆä್ಲೕ ಆಕ್ಸಿಜನ್‌ ಸೌಲಭ್ಯ ಇದ್ದರೂ ಕೇವಲ ಇಬ್ಬರು ರೋಗಿಗಳನ್ನು ದಾಖಲು ಮಾಡಿಕೊಂಡಿಕೊಂಡು ಉಳಿದ ಹಾಸಿಗೆಗಳನ್ನು ಖಾಲಿ ಇರಿಸಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರ್ಗಸೂಚಿ ವಿರುದ್ಧವಾಗಿ ಲಘು ಮತ್ತು ಮಧ್ಯಮ ರೋಗ ಲಕ್ಷಣ ಇದ್ದವರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸದೆ ಆಸ್ಪತ್ರೆಯಲ್ಲಿ ದಾಖಲು ಮಾಡಿರುವುದಕ್ಕೆ ಆಸ್ಪತ್ರೆಯ ಅಧೀಕ್ಷಕರು ಹಾಗೂ ಸಿಬ್ಬಂದಿ ವಿರುದ್ಧ ಸಚಿವರು ಹರಿಹಾಯ್ದರು.

ಸ್ವ್ಯಾಬ್‌ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಅವರು, ದಿನಕ್ಕೆ 500 ಸ್ಯಾಂಪಲ್‌ ಸಂಗ್ರಹ ಮಾಡಲೇಬೇಕು ಎಂದು ತಾಕೀತು ಮಾಡಿದರು. ಐಸಿಯು ಮತ್ತು ವೆಂಟಿಲೇಟರ್‌ ಅಳವಡಿಕೆ ವಿಳಂಬವಾಗುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಅತ್ಯಂತ ಪವಿತ್ರ ವೃತ್ತಿಯಾದ ವೈದ್ಯ ವೃತ್ತಿಯಲ್ಲಿ ಇರುವವರು ಮಾನವೀಯತೆಯಿಂದ ಕೆಲಸ ಮಾಡಬೇಕೇ ಹೊರತು ಕಟುಕರಂತೆ ವರ್ತಿಸಬಾರದು. ಚಿಕಿತ್ಸೆಗಾಗಿ ಜನರು ರಸ್ತೆಗಳಲ್ಲಿ ಅಲೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.

ಇಬ್ಬರು ಅಧಿಕಾರಿಗಳ ಅಮಾನತಿಗೆ ಸೂಚನೆ:

ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇದ್ದೂ ರೋಗಿಗಳಿಗೆ ಒದಗಿಸದೆ ಮಾರ್ಗಸೂಚಿ ಉಲ್ಲಂಘಿಘಿಸಿ, ಕರ್ತವ್ಯ ಲೋಪ ಎದುರಿಸಿದ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದ ಅಮಾನತ್ತಿನಲ್ಲಿ ಇರಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಅನಸ್ತೇಷಿಯಾ ವಿಭಾಗದಲ್ಲಿ ಆರು ಮಂದಿ ತಜ್ಞರು ಇದ್ದರೂ ವೆಂಟಿಲೇಟರ್‌ ಅಳವಡಿಕೆ ಮಾಡಿಲ್ಲ. ಈ ತಜ್ಞರನ್ನೂ ಬೇರೆ ಆಸ್ಪತ್ರೆಗೆ ಏಕೆ ನಿಯೋಜಿಸಲಿಲ್ಲ ಎಂದು ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ರೋಗಿಗಳೊಂದಿಗೆ ವಿಡಿಯೋ ಕಾಲ್‌ ಮೂಲಕ ಮಾತನಾಡಿ ಆಸ್ಪತ್ರೆಯಲ್ಲಿ ಒದಗಿಸಿರುವ ಸೌಲಭ್ಯ ಮತ್ತು ಚಿಕಿತ್ಸೆಯ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ರಾಧಾಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ದಿನಕ್ಕೆ 30-40 ಸಾವಿರ ಪರೀಕ್ಷೆಗೆ ಸಿದ್ಧತೆ

 ‘ಕೊರೋನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಸ್ವತಃ ತಾವೇ ಲ್ಯಾಬ್‌ಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಬುಧವಾರ ಒಟ್ಟು 22 ಸಾವಿರ ಕೊರೋನಾ ಪರೀಕ್ಷೆ ಮಾಡಿದ್ದು, ಮುಂದಿನ ಎರಡು ವಾರದಲ್ಲಿ 30-40 ಸಾವಿರ ಪರೀಕ್ಷೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಜೊತೆ ಸಭೆಗಳನ್ನು ಮಾಡಲಾಗಿದೆ’ ಎಂದು ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸ್ಯಾಂಪಲ್‌ ಸಂಗ್ರಹ ಹಚ್ಚಾಗುತ್ತಿರುವುದರಿಂದ ಪರೀಕ್ಷಾ ವರದಿ ಬರುವುದು ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸಿದ್ದು, 24 ತಾಸಿನೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಾಸಿಟಿವ್‌ ಇದ್ದವರಿಗೆ ನೆಗೆಟಿವ್‌ ವರದಿ ಕೊಟ್ಟಿರುವ ಬಗ್ಗೆ ಗಮನಕ್ಕೆ ಬಂದಿದೆ. ಆರ್‌ಟಿಪಿಸಿಆರ್‌ ಟೆಸ್ಟ್‌ನಲ್ಲಿ ಈ ರೀತಿ ಆಗಿಲ್ಲ. ಆಂಟಿಜನಿಕ್‌ ಟೆಸ್ಟ್‌ನಲ್ಲಿ ಕೆಲವೊಮ್ಮೆ ಪಾಸಿಟಿವ್‌ ಇದ್ದವರಿಗೆ ನೆಗೆಟಿವ್‌ ಬರುವ ಸಂದರ್ಭವಿದೆ. ಅದರಲ್ಲಿ ಪಾಸಿಟಿವ್‌ ತೋರಿಸಿದರೆ ರೋಗ ಲಕ್ಷಣ ಹೆಚ್ಚಾಗಿರುತ್ತದೆ. ನೆಗೆಟಿವ್‌ ರಿಪೋರ್ಟ್‌ ಬಂದರೂ ಅವರಿಗೆ ರೋಗ ಲಕ್ಷಣ ಇದ್ದರೆ ಅವರನ್ನು ಆರ್‌ಟಿಪಿಸಿಆರ್‌ ಟೆಸ್ಟ್‌ಗೆ ಒಳಪಡಿಸುವುದಾಗಿ ಸಚಿವರು ತಿಳಿಸಿದರು. ಇನ್ನೂ ಪ್ಲಾಸ್ಮಾ ಚಿಕಿತ್ಸೆ ನಮ್ಮಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೊರೋನಾದಿಂದ ಗುಣಮುಖರಾದವರಿಗೆ ರಕ್ತದಾನ ಮಾಡಲು ಮನವಿ ಮಾಡಲಾಗಿದೆ. ಇದಕ್ಕಾಗಿ ದಾನಿಗಳಿಗೆ ಪ್ರೋತ್ಸಾಹ ಧನವಾಗಿ 5 ಸಾವಿರ ರು. ನೀಡುವುದಾಗಿ ಹೇಳಿದರು.