ಕೊರೋನಾ 3ನೇ ಅಲೆಗೆ ಗಡಿಯಲ್ಲಿ ಬ್ರೇಕ್ : ತಾಕೀತು
- ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಗೆ ಹರಡುವಿಕೆಗೆ ನಿಯಂತ್ರಿಸುವ ಸಲುವಾಗಿ ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ಕ್ರಮ
- ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ
ಬೆಂಗಳೂರು (ಜು.13): ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಗೆ ಹರಡುವಿಕೆಗೆ ನಿಯಂತ್ರಿಸುವ ಸಲುವಾಗಿ ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ಕ್ರಮಗಳನ್ನು ಜರುಗಿಸುವಂತೆ ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಸೋಮವಾರ ರಾತ್ರಿ ವಿಡಿಯೋ ಕಾನ್ಫೆರನ್ಸ್ ಮೂಲಕ ರಾಜ್ಯದ ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಕೊರೋನಾ ತಪಾಸಣೆ ನಡೆಸುವಂತೆ ಪೊಲೀಸರಿಗೆ ತಿಳಿಸಿದರು. ಗಡಿ ಭಾಗದ ಚೆಕ್ ಪೋಸ್ಟ್‌ಗಳಲ್ಲೇ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಜನರು ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆರ್‌ಟಿಪಿಸಿಆರ್ ನೆಗೆಟಿವ್ ವರದಿ ನೀಡುವಂತೆ ಜನರಿಗೆ ಸೂಚಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಅಂತಹವರ ಗಂಟಲು ದ್ರವ ಪರೀಕ್ಷೆಗೆ ಗಡಿಯಲ್ಲೇ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
'ಎಚ್ಚರ.. 3ನೇ ಅಲೆ ಸನ್ನಿಹಿತ: ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವ ಮುಂದೂಡಿ!'
ಕಳೆದ ಬಾರಿ ಆ ಎರಡು ರಾಜ್ಯಗಳಿಂದ ಬಂದ ಜನರಿಂದಲೇ ರಾಜ್ಯದಲ್ಲಿ ಸೋಂಕು ಹರಡಿತು. ಈ ಬಾರಿ ಕಳೆದ ಬಾರಿಯಂತೆ ತಪ್ಪಾಗದಂತೆ ಗಡಿಗಳಲ್ಲಿ ಮುನ್ನಚ್ಚರಿಕೆ ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಇದ್ದರು.