ರೈತರಿಗೆ ಸಂತಸದ ಸುದ್ದಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್
ಒಂದು ಸಾವಿರ ಕೋಟಿ ರು. 50 ಲಕ್ಷ ರೈತರಿಗೆ ಬಿಡುಗಡೆ| ರೈತರು ತಮ್ಮ ಖಾತೆಯನ್ನು ಪರಿಶೀಲಿಸಬೇಕು| 2019-20ನೇ ಸಾಲಿನ ಬೆಳೆ ವಿಮೆಯನ್ನು ರೈತರ ಖಾತೆಗೆ ಜಮೆ| ವಿಮೆಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಚಿಂತಿಸುವ ಅವಶ್ಯಕತೆಯಿಲ್ಲ| ಸರ್ಕಾರ ಮತ್ತು ಇಲಾಖೆ ಎಂದಿಗೂ ರೈತರೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ|
ಬೆಂಗಳೂರು(ಆ.17): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಒಂದು ಸಾವಿರ ಕೋಟಿ ರು.ಗಳನ್ನು 50 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದೆ. ಶನಿವಾರದಿಂದ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ರಾಜ್ಯದ ರೈತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರೈತರು ತಮ್ಮ ಖಾತೆಯನ್ನು ಪರಿಶೀಲಿಸಬೇಕು. 2019-20ನೇ ಸಾಲಿನ ಬೆಳೆ ವಿಮೆಯನ್ನು ಮಂಗಳವಾರದಿಂದ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ವಿಮೆಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಚಿಂತಿಸುವ ಅವಶ್ಯಕತೆಯಿಲ್ಲ. ಸರ್ಕಾರ ಮತ್ತು ಇಲಾಖೆ ಎಂದಿಗೂ ರೈತರೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ’ ಎಂದು ಹೇಳಿದರು.
ರೈತರಿದ್ದಲ್ಲಿಗೇ ಬರುತ್ತೆ ಕೃಷಿ ಆರೋಗ್ಯ ವಾಹನ: ದೇಶದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಜಾರಿ
ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಕಳೆದ ಸಾಲಿಗಿಂತ ಈ ವರ್ಷ ಶೇ.25 ರಷ್ಟು ಹೆಚ್ಚಿನದಾಗಿ ಬಿತ್ತನೆಯಾಗಿದೆ. ಈ ವರ್ಷ 65 ಸಾವಿರ ಮೆಟ್ರಿಕ್ ಟನ್ ಯೂರಿಯಾ ಹೆಚ್ಚಿನದಾಗಿ ಪೂರೈಕೆಯಾಗುತ್ತಿದ್ದು, ಈ ವಾರ 37 ಸಾವಿರ ಟನ್ ಯೂರಿಯಾ ಸರಬರಾಜು ಆಗಲಿದೆ. ಯೂರಿಯಾವನ್ನು ರೈತರು ಭೂಮಿಗೆ ಎಷ್ಟುಅಗತ್ಯವೋ ಅಷ್ಟುಪ್ರಮಾಣದಲ್ಲಿ ಮಾತ್ರ ಬಳಸಬೇಕು. ಯಾವುದೇ ರಾಸಾಯನಿಕ ಔಷಧಿಯಾಗಲೀ ರಸಗೊಬ್ಬರವನ್ನಾಗಲೀ ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಿದಲ್ಲಿ ಭೂಮಿಯ ಫಲವತ್ತತೆ ಕ್ಷೀಣಿಸುವ ಸಾಧ್ಯತೆಯೂ ಇದೆ. ಹೀಗಾಗಿ ರೋಗಕ್ಕೆ ಎಷ್ಟುಮದ್ದಿನ ಅಗತ್ಯತೆ ಇದೆಯೋ ಅಷ್ಟನ್ನು ಮಾತ್ರ ಬಳಸಬೇಕು’ ಎಂದು ಸಚಿವರು ರೈತರಿಗೆ ಕಿವಿ ಮಾತು ಹೇಳಿದರು.
ಇಲಾಖೆಯ ವೃಂದ ಮತ್ತು ನೇಮಕಾತಿ ಪ್ರಕ್ರಿಯೆಗೆ ನಿಯಮಗಳ ಕರಡು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟುಬೇಗ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.