ಬೆಂಗಳೂರು[ಜ.05]: ಜನನಿಬಿಡ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ವಾಣಿಜ್ಯ ಕೇಂದ್ರ, ಶಾಪಿಂಗ್‌ ಮಾಲ್‌ಗಳಲ್ಲಿ ಕಿರು ಚಿತ್ರಮಂದಿರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಕರಡು ನಿಯಮ ಪ್ರಕಟಿಸಿದೆ.

ಈಗಾಗಲೇ ಇರುವ ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮ​-2014ಕ್ಕೆ ಹೊಸದಾಗಿ ಕಿರು ಚಿತ್ರಮಂದಿರ ನಿರ್ಮಾಣ, ಲೈಸೆನ್ಸ್‌ ಪಡೆದುಕೊಳ್ಳುವಿಕೆ ಮುಂತಾದ ಅಂಶಗಳಿರುವ ಕರಡು ನಿಯಮ ರಚಿಸಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಸಲ್ಲಿಸುವಂತೆ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಕಿರು ಚಿತ್ರಮಂದಿರ ಅಥವಾ ಮಿನಿ ಡಿಜಿಟಲ್‌ ಥಿಯೇಟರ್‌ ಗರಿಷ್ಠ 199 ಆಸನಗಳನ್ನು ಹೊಂದಿರಬೇಕು. ಫೆä್ಲೕರ್‌ ವಿಸ್ತೀರ್ಣ ಕನಿಷ್ಠ ನಾಲ್ಕು ಸಾವಿರ ಚದರ ಅಡಿ ಇರಬೇಕು. ಇಂತಹ ಚಿತ್ರ ಮಂದಿರಗಳನ್ನು ವಾಣಿಜ್ಯ ಕೇಂದ್ರ, ಶಾಪಿಂಗ್‌ ಮಾಲ್‌, ಸಮಾವೇಶ ಕೇಂದ್ರ, ಬಸ್‌ ಹಾಗೂ ರೈಲ್ವೆ ನಿಲ್ದಾಣ, ಬಹು ಉಪಯೋಗಿ ಪ್ರದೇಶ ಮುಂತಾದವುಗಳಲ್ಲಿ ಸ್ಥಾಪಿಸಬಹುದಾಗಿದೆ. ಆದರೆ ಜನವಸತಿ ಪ್ರದೇಶಗಳಲ್ಲಿ ಕಿರುಚಿತ್ರ ಮಂದಿರ ಸ್ಥಾಪನೆಗೆ ಅವಕಾಶ ನೀಡಲಾಗುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಅನುಮತಿ ಕೊಡಬಹುದಾಗಿದೆ. ಬಹು ಪರದೆ ಚಿತ್ರಮಂದಿರ ಇರುವ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಅಗ್ನಿ ಸುರಕ್ಷತೆ, ನೀರಿನ ಟ್ಯಾಂಕ್‌ ಮುಂತಾದ ಸುರಕ್ಷತೆಗಳು ಇದ್ದಲ್ಲಿ ಅನುಮತಿ ಕೊಡಬಹುದಾಗಿದೆ. ಏಕ ಪರದೆ ಚಿತ್ರಮಂದಿರಗಳನ್ನು ಮಿನಿ ಚಿತ್ರಮಂದಿರಗಳಾಗಿ ಪರಿವರ್ತಿಸಲು ಅವಕಾಶ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಏಕ ಗವಾಕ್ಷಿ ಮೂಲಕ ಅನುಮತಿ:

ಕಿರು ಚಿತ್ರಮಂದಿರಗಳ ಆರಂಭಕ್ಕೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಲೈಸೆನ್ಸ್‌ ನೀಡಲಾಗುತ್ತದೆ. ಚಿತ್ರಮಂದಿರ ಸ್ಥಾಪಿಸಲು ಆಸಕ್ತಿ ಇರುವವರು ಅರ್ಜಿಯೊಂದಿಗೆ ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ ಮೂಲಕ ಸಂಬಂಧಪಟ್ಟಲೈಸೆನ್ಸ್‌ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ನಂತರ ಪ್ರಾಧಿಕಾರವು ಲೋಕೋಪಯೋಗಿ ಸ್ಥಳೀಯ ಸಂಸ್ಥೆ, ವಿದ್ಯುತ್‌, ಅಗ್ನಿಶಾಮಕ, ಪೊಲೀಸ್‌ ಇಲಾಖೆಗೆ ಅರ್ಜಿ ರವಾನಿಸಿ ಯಾವುದೇ ರೀತಿಯ ಆಕ್ಷೇಪ ಇದ್ದಲ್ಲಿ ಮೂವತ್ತು ದಿನದೊಳಗೆ ಸಲ್ಲಿಸುವಂತೆ ಕೋರಲಿದೆ.