Asianet Suvarna News Asianet Suvarna News

ಹಾಲಿನ ದರ 3 ರು. ಹೆಚ್ಚಳ: ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ, ಸಚಿವ ಎಸ್‌ಟಿಎಸ್‌

ಹಾಲು ಒಕ್ಕೂಟಗಳಿಗೆ ಅನ್ಯಾಯ ಆಗಬಾರದು. ರೈತರಿಗೆ ಅನುಕೂಲವಾಗಬೇಕು. ಜೊತೆಗೆ ಗ್ರಾಹಕರ ಜೇಬಿಗೆ ಹೊರ ಆಗಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ ಎಸ್‌ಟಿಎಸ್‌ 

Milk Price Increase After Discussion With CM Basavaraj Bommai says ST Somashekhar grg
Author
First Published Sep 14, 2022, 1:19 PM IST

ವಿಧಾನ ಪರಿಷತ್‌(ಸೆ.14):  ರಾಜ್ಯದಲ್ಲಿ 16 ಹಾಲು ಒಕ್ಕೂಟಗಳಿದ್ದು, ಕೆಎಂಎಫ್‌ ಸಭೆಯಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್‌ ಸದಸ್ಯ ಎಸ್‌.ರವಿ ಈ ಕುರಿತು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ಹಾಲಿನ ದರ ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳ ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ ಎಂಬ ಮಾಹಿತಿ ಇದ್ದು, ಈ ಕುರಿತು ಸಮಾಲೋಚನೆ ನಡೆಸುತ್ತೇನೆ. ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ. ಹೆಚ್ಚಿಸಿದ ಬೆಲೆಯ ಲಾಭವನ್ನು ರೈತರಿಗೆ ನೀಡುವ ಭರವಸೆಯನ್ನು ಸಹ ಒಕ್ಕೂಟ ನೀಡಿದೆ. ಇದರಿಂದ ಆದಷ್ಟುಬೇಗ ಕ್ರಮ ಆಗಲಿದೆ ಎಂದರು.

Milk Price Rise: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ..?

ಹಾಲು ಒಕ್ಕೂಟಗಳಿಗೆ ಅನ್ಯಾಯ ಆಗಬಾರದು. ರೈತರಿಗೆ ಅನುಕೂಲವಾಗಬೇಕು. ಜೊತೆಗೆ ಗ್ರಾಹಕರ ಜೇಬಿಗೆ ಹೊರ ಆಗಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಸದಸ್ಯ ಎಸ್‌. ರವಿ ಮಾತನಾಡಿ, ಕೋವಿಡ್‌ ಸಮಯದಲ್ಲಿ 20 ಲಕ್ಷ ಲೀಟರ್‌ ಹಾಲು ಸಂಗ್ರಹ ಮಾಡುತ್ತಿದ್ದೆವು. 12 ಲಕ್ಷ ಲೀಟರ್‌ ಮಾರಾಟ ಆಗುತ್ತಿತ್ತು. ಉಳಿದದ್ದು ಹಾಲಿನ ಪುಡಿ ಹಾಗೂ ಉಪ ಉತ್ಪನ್ನ ಮಾಡಿದೆವು. ಕೋವಿಡ್‌ ಸಂದರ್ಭ ಕೇವಲ ಐದು ಲಕ್ಷ ಲೀಟರ್‌ ಹಾಲು ಮಾತ್ರ ಮಾರಾಟವಾಯಿತು. ಆಗ ಉಳಿದ ಹಾಲನ್ನು ಉಪ ಉತ್ಪನ್ನವಾಗಿ ಪರಿವರ್ತಿಸಿ ಒಕ್ಕೂಟವನ್ನು ಜೀವಂತವಾಗಿರಿಸಿದೆ. ಈ ಬಾರಿ ಹಲವೆಡೆ ಮಲೆನಾಡಿನ ಮಾದರಿಯಲ್ಲಿ ಮಳೆ ಆಗಿದೆ. ಇದರ ಪರಿಣಾಮ ಹಸುವನ್ನು ಆಚೆ ಬಿಡಲು ಆಗುತ್ತಿಲ್ಲ. ಮೇವಿನಲ್ಲಿ ನೀರಿನಾಂಶ ಹೆಚ್ಚಾಗಿದೆ. ಇದರಿಂದ ಹಾಲಲ್ಲಿ ಜಿಡ್ಡು, ಕೊಬ್ಬಿನ ಪ್ರಮಾಣ ಕಡಿಮೆಯಾಗಿದೆ. ಈಗ ಹಾಲು ಉತ್ಪಾದನೆ 20 ರಿಂದ 16. ಲಕ್ಷ ಲೀಟರ್‌ ಗೆ ಕುಸಿದಿದೆ. ರೈತರು ಜಾನುವಾರುಗಳನ್ನು ಮಾರುತ್ತಿದ್ದಾರೆ. ಮೇವು, ವಿದ್ಯುತ್‌, ಸಾಗಣಿಕೆ ವೆಚ್ಚ ಹೆಚ್ಚಾಗಿದೆ. ಇದರಿಂದ ದರ ಹೆಚ್ಚಳ ಅನಿವಾರ್ಯ ಎಂದು ಸದನದ ಗಮನಕ್ಕೆ ತಂದರು.

ಹಾಲು ಖರೀದಿ ದರ ಹೆಚ್ಚಿಸಲು ಒತ್ತಾಯ

ಕೋಲಾರ: ರೈತ ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸುವಂತೆ ಹಾಗೂ 2018ರ ಆಗಸ್ಟ್‌ 14ರ ಆದೇಶದ ಪ್ರಕಾರ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಿಂದ ರೈತರು ಪಡೆದಿದ್ದ ಬೆಳೆ ಸಾಲ ಮನ್ನಾ ಮಾಡಬೇಕು ಹಾಗು ಬೆಳೆನಷ್ಟಪರಿಹಾರ ವೈಜ್ಞಾನಿಕವಾಗಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಭಾರತೀಯ ಕಿಸಾನ್‌ ಸಂಘ ಮತ್ತು ಅಖಿಲಭಾರತ ಕಿಸಾನ್‌ ಮಂಚ್‌ ಜಂಟಿಯಾಗಿ ಪ್ರತಿಭಟನಾ ಧರಣಿ ನಡೆಸಿ ಮುಖ್ಯಮಂತ್ರಿಗೆ ಎಡಿಸಿ ಡಾ.ಸ್ನೇಹ ಮುಖಾಂತರ ಮನವಿ ಸಲ್ಲಿಸಿದರು.

ಅಖಿಲ ಭಾರತ ಕಿಸಾನ್‌ ಮಂಚ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಎಂ.ಗೋಪಾಲ್‌ ಮಾತನಾಡಿ, ಹಾಲು ಉತ್ಪಾದನಾ ವೆಚ್ಚ ಒಂದು ಲೀಟರ್‌ಗೆ 50 ರು. ಮೀರಿದೆ. ಇದನ್ನು ಹಾಲು ಒಕ್ಕೂಟ ಮತ್ತು ಕೆ.ಎಂ.ಎಫ್‌ ನೋಡಿಯೂ ನೋಡದಂತೆ ವರ್ತಿಸುತ್ತಿವೆ. ಇದರಿಂದ ಹೈನುಗಾರಿಕೆಯಿಂದ ರೈತರು ನಷ್ಟಹೊಂದುತ್ತಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಕಿಸಾನ್‌ ಸಂಘ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಗ್ರವಾದ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

Milk Price Hike: ಸರ್ಕಾರದ ಒಪ್ಪಿಗೆ ಕೇಳದೆ ಹಾಲಿನ ದರ 3 ಹೆಚ್ಚಳ?

ಸರ್ಕಾರದಿಂದ ರೈತರ ಕಡೆಗಣನೆ

ತಾಲೂಕು ಅಧ್ಯಕ್ಷ ನಾಗನಾಳ ಗೋಪಾಲಕೃಷ್ಣ ಮಾತನಾಡಿ, ಹಿಂದೆ ರೈತರಿಗೆ ಮಾರ್ಗದರ್ಶನ ನೀಡಲು ಗ್ರಾಮ ಸಹಾಯಕರು ನೆರವಾಗುತ್ತಿದ್ದರು, ಯಾವ ಬೆಳೆ ಬೆಳೆಯಬೇಕೆಂಬ ಮಾರ್ಗದರ್ಶನ ನೀಡುತ್ತಿದ್ದರು. ಆದರೆ ಈಗ ಈ ಬಗ್ಗೆ ಹೇಳುವವರೇ ಕೇಳುವವರೇ ಇಲ್ಲ. ರೈತರ ಸಮಸ್ಯೆಗಳು ಬಗೆಹರಿಸಲು ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಾರೆ. ರೈತರಿಗಾಗಿ ಇರುವ ಇಲಾಖೆಗಳಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ಕೃಷಿಕರ ಹೆಸರಿನಲ್ಲೇ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜನಪ್ರತಿನಿಧಿಗಳು ರೈತರಿಗೆ ಸೇವೆ ಮಾಡಲು ಬರುವ ಅಧಿಕಾರಿಗಳು ಸಿಬ್ಬಂದಿ ರೈತರ ಬಗ್ಗೆ ತಾತ್ಸಾರ ಮನೋಭಾವ ತಾಳಿರುವುದು ಖಂಡನೀಯ ಎಂದರು.

ಧರಣಿಯಲ್ಲಿ ಸಂಘಟನೆಯ ಮುಳಬಾಗಿಲು ತಾಲೂಕು ಅಧ್ಯಕ್ಷ ಮನ್ನೇನಹಳ್ಳಿ ಕೆ.ರಘುನಾಥರೆಡ್ಡಿ, ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಮಹಿಳಾ ಪ್ರಮುಖ್‌ ಭೀಮಾಪುರ ಬಿ.ಎಸ್‌.ಶಶಿಕಲಾ, ಭೀಮಾಪುರ ಡೇರಿ ಕಾರ್ಯದರ್ಶಿ ಶಾರದಮ್ಮ, ಬಿ.ಕೆ.ಎಸ್‌. ಜಿಲ್ಲಾಧ್ಯಕ್ಷ ಕೆ.ರೋಹನ್‌ಕುಮಾರ್‌, ಉಪಾಧ್ಯಕ್ಷ ಎಂ.ಕೆ.ಶ್ರೀನಿವಾಸ್‌, ಮುಳಬಾಗಿಲು ತಾಲೂಕು ಉಪಾಧ್ಯಕ್ಷ ಹೆಚ್‌.ಗೊಲ್ಲಹಳ್ಳಿ ವೆಂಕಟರಾಮಪ್ಪ, ಕಾರ್ಯದರ್ಶಿ ವಕೀಲ ವಿ.ಜಯಪ್ಪ, ಪಿ.ಗಂಗಾಪುರ ಮುನಿರಾಮಯ್ಯ, ಮುಖಂಡರಾದ ಕೊಲದೇವಿ ಕೆ.ನಾರಾಯಣಪ್ಪ, ಚೌಡಮ್ಮ, ಮಾರಂಡಹಳ್ಳಿ ಜಿ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮುಖಂಡರಾದ ಹೆಚ್‌.ಕೋಡಿಹಳ್ಳಿ ಹೆಚ್‌.ಸಿ.ರೆಡ್ಡಪ್ಪ, ಸುಣ್ಣಂಗೂರು ಸಂಪಂಗಿ, ಎನ್‌.ಶ್ರೀನಿವಾಸರೆಡ್ಡಿ, ಮುಡಿಯನೂರು ಜಯಲಕ್ಷ್ಮಮ್ಮ ಇದ್ದರು.
 

Follow Us:
Download App:
  • android
  • ios