* ಮೇಲುಕೋಟೆ ಬಾಹುಬಲಿ ರಾಮಸ್ವಾಮಿ ನಿಧನ* ಪ್ರಯಾಸವಿಲ್ಲದೆ ನಿತ್ಯವೂ ಬೆಟ್ಟಕ್ಕೆ ನೀರು ಹೊತ್ತು ತರುತ್ತಿದ್ದ ಅಯ್ಯಂಗಾರ್* ಶ್ರೀಯೋಗ ನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ ಕೈಂಕರ್ಯ ಮಾಡುತ್ತಿದ್ದ ರಾಮಸ್ವಾಮಿ
ಮೇಲುಕೋಟೆ(ಜೂ.15): ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಯೋಗ ನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ ಕೈಂಕರ್ಯಮಾಡುತ್ತಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮೇಲುಕೋಟೆಯ ಬಾಹುಬಲಿ ಎಂದೇ ಹೆಸರಾಗಿದ್ದ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ (75) ಸೋಮವಾರ ವೈಕುಂಠವಾಸಿಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ರಾಮಸ್ವಾಮಿ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಭಾರೀ ಗಾತ್ರದ ಪಾತ್ರೆಯಲ್ಲಿ ಬೆಟ್ಟದ ಮಧ್ಯಭಾಗದ ಬಾವಿಯಿಂದ ನೀರು ತೆಗೆದುಕೊಂಡು ಯಾವುದೇ ಪ್ರಯಾಸವಿಲ್ಲದೆ ನೂರಾರು ಕಡಿದಾದ ಮೆಟ್ಟಿಲು ಹತ್ತಿ ನರಸಿಂಹನ ಅಭಿಷೇಕ ಮತ್ತು ಪ್ರಸಾದಗಳಿಗೆ ಸಮರ್ಪಿಸುತ್ತಿದ್ದ ಅವರ 6 ದಶಕಗಳ ಸೇವೆ ಭಕ್ತರಲ್ಲಿ ವಿಸ್ಮಯ ಮೂಡಿಸಿತ್ತು.
ಇಳಿ ವಯಸ್ಸಿನಲ್ಲೂ ಭಾರಹೊತ್ತು ಹಲವು ಸಲ ಸಲೀಸಾಗಿ ಮೆಟ್ಟಿಲು ಹತ್ತುತ್ತಿದ್ದ ಅವರ ಜೀವನಶೈಲಿ ಮೇಲುಕೋಟೆ ಜನತೆ ಮತ್ತು ಭಕ್ತರಿಗೆ ಮಾದರಿಯಾಗಿತ್ತು. ಇದರ ಜೊತೆಗೆ ರಾಮಸ್ವಾಮಿ ಗೋವುಗಳ ಒಡನಾಟ ಬೆಳೆಸಿಕೊಂಡು ನಾಟಿ ಹಸುಗಳನ್ನು ಸಹ ಸಾಕುತ್ತಿದ್ದರು. ಇತ್ತೀಚೆಗೆ ನಡೆದ ರಾಜಗೋಪುರ ಕಳಸಪ್ರತಿಷ್ಠಾಪನೆ ಮಹೋತ್ಸವದಲ್ಲೂ ಲವಲವಿಕೆಯಿಂದ ಪಾಲ್ಗೊಂಡಿದ್ದ ಅವರು ಎಂದೂ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರಲಿಲ್ಲ ಆದರೆ 3 ದಿನಗಳ ಹಿಂದೆ ಅನಾರೋಗ್ಯಪೀಡಿತಾಗಿದ್ದರು.
ವಿಶೇಷವೆಂದರೆ ಸೌರಮಾನ ನರಸಿಂಹ ಜಯಂತಿಯಂದೇ ಅವರು ಪ್ರಾಣ ತ್ಯಾಗ ಮಾಡಿದ್ದಾರೆ ರಾಮಸ್ವಾಮಿ ನಿಧನಕ್ಕೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ನಾಗರೀಕರು ಕೈಂಕರ್ಯಪರರು ಕಂಬನಿ ಮಿಡಿದಿದ್ದಾರೆ.
