- ರಾಜ್ಯ ಕಾಂಗ್ರೆಸ್‌ ಇನ್ನಷ್ಟುಹೋರಾಟ- ಮಲೆನಾಡು, ಕಿತ್ತೂರು, ಕಲ್ಯಾಣ, ಕರಾವಳಿ ಕರ್ನಾಟಕದಲ್ಲೂ ಚಳವಳಿಗೆ ರಣಕಹಳೆ- ಬೆಂಗಳೂರಿನಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ, ಪಾದಯಾತ್ರೆಗೆ ವಚನಾನಂದ ಬೆಂಬಲ

ಬೆಂಗಳೂರು (ಮಾ.4): ಬೆಂಗಳೂರು (Bengaluru) ಸೇರಿ ಕಾವೇರಿ ಕಣಿವೆಯ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಮೇಕೆದಾಟು (Mekedatu Project) ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ 140 ಕಿ.ಮೀ. ಉದ್ದದ ‘ನೀರಿಗಾಗಿ ನಡಿಗೆ’ ಪಾದಯಾತ್ರೆ (Padayatre)ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗುರುವಾರ ಬೆಂಗಳೂರಿನ ನ್ಯಾಷನಲ್‌ ಕಾಲೇಜು (National Collage)ಮೈದಾನದಲ್ಲಿ ಶಕ್ತಿ ಪ್ರದರ್ಶನ ಮಾಡುವ ಜತೆಗೆ ಸರಣಿ ಹೋರಾಟಗಳ ಸುಳಿವಿನೊಂದಿಗೆ ಕಾಲ್ನಡಿಗೆ ಅಂತ್ಯಗೊಂಡಿದೆ.

ಇದೇ ವೇಳೆ, ಮೇಕೆದಾಟು ಯೋಜನೆಗೆ ಬದ್ಧ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲೇ ಮೇಕೆದಾಟು ಆಣೆಕಟ್ಟು ಯೋಜನೆ ಘೋಷಿಸಿ ಐದು ಸಾವಿರ ಕೋಟಿ ರು. ಅನುದಾನ ಮೀಸಲಿಡಬೇಕು ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ. ಅಲ್ಲದೆ ‘ಇದು ಕುಡಿಯುವ ನೀರಿಗಾಗಿ ನಡೆದ ಜನಪರ ಹೋರಾಟ. ಇಂತಹ ಜನಪರ ಹೋರಾಟಗಳನ್ನು ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕದಲ್ಲೂ ಮಾಡುತ್ತೇವೆ. ಜತೆಗೆ ರಾಜಕೀಯ ಹೋರಾಟವನ್ನೂ ಪ್ರಾರಂಭಿಸುತ್ತೇವೆ. ರಾಜ್ಯದಲ್ಲಿ ಕೋಮುವಾದಿ, ಭ್ರಷ್ಟ, ನಿಷ್ಕಿ್ರಯ, ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ರಾಜಕೀಯ ಹೋರಾಟವನ್ನೂ ಬಹಿರಂಗವಾಗಿಯೇ ಮಾಡುತ್ತೇವೆ’ ಎಂದು ರಾಜಕೀಯ ಹಾಗೂ ಜನಪರ ಹೋರಾಟದ ಪಾಂಚಜನ್ಯ ಮೊಳಗಿಸಿದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರೊದಗಿಸಲು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಮೊದಲಿಗೆ ಮೈಸೂರು ರಾಜರು ನೀರು ಹರಿಸಿದರು. ಉಳಿದಂತೆ ಕಾವೇರಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಹರಿಸಿದ ಆರು ಹಂತಗಳ ಕುಡಿಯುವ ನೀರಿನ ಯೋಜನೆಯನ್ನೂ ಕಾಂಗ್ರೆಸ್‌ ಅವಧಿಯಲ್ಲೇ ಮಾಡಲಾಗಿದೆ. ಬಿಜೆಪಿಗೆ ಮೇಕೆದಾಟು ಯೋಜನೆ ಬಗ್ಗೆ ಇಚ್ಛಾಶಕ್ತಿ ಇಲ್ಲ. ಹೀಗಾಗಿ 2023ಕ್ಕೆ ಪುನಃ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಆದ್ಯತೆಯ ಯೋಜನೆಯಾಗಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

Mekedatu Project: ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಇಂದು ಅಂತ್ಯ
ಜ.9ರಂದು ಮೇಕೆದಾಟು ಸಂಗಮ ಬಳಿ ಪ್ರಾರಂಭವಾಗಿದ್ದ 169 ಕಿ.ಮೀ. ಉದ್ದದ ಮೇಕೆದಾಟುವಿನಿಂದ ಬೆಂಗಳೂರುವರೆಗಿನ ಪಾದಯಾತ್ರೆ ಹೈಕೋರ್ಟ್‌ ಮಧ್ಯಪ್ರವೇಶದಿಂದ 4 ದಿನಗಳಲ್ಲೇ ರಾಮನಗರದಲ್ಲಿ ಮೊಟಕುಗೊಂಡಿತ್ತು. ಬಳಿಕ ಫೆ.27 ರಿಂದ ಎರಡನೇ ಕಂತಿನಲ್ಲಿ ರಾಮನಗರದಿಂದಲೇ ಶುರುವಾದ ಐದು ದಿನಗಳ ಪಾದಯಾತ್ರೆ 18 ವಿಧಾನಸಭೆ ಕ್ಷೇತ್ರಗಳಲ್ಲಿ 79.8 ಕಿ.ಮೀ. ಸಾಗಿ ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ಸಮಾರೋಪಗೊಂಡಿತು.

ಇದಕ್ಕೂ ಮೊದಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೈ ಪಾದಯಾತ್ರೆ: ಹೈಕೋರ್ಟ್‌ನಿಂದ ಮಹತ್ವದ ಆದೇಶ
ಸ್ವಾಮೀಜಿಗಳ ಕರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅಲ್ಲದೆ ನೆಲ, ಜಲ, ನಾಡು, ನುಡಿ ವಿಚಾರದಲ್ಲಿ ಪ್ರತಿಷ್ಠೆ, ರಾಜಕೀಯ ವಿಚಾರಗಳನ್ನು ಬದಿಗೊತ್ತಿ ಇಡೀ ನಾಡು ಒಂದು ಪಕ್ಷವಾಗಿ ಹೋರಾಟ ಮಾಡಬೇಕು. ನೆರೆಯ ರಾಜ್ಯಗಳ ರೀತಿಯಲ್ಲಿ ನಮ್ಮ ನಾಡಿನಲ್ಲೂ ಸಹ ನಮ್ಮ ಹಕ್ಕಿಗಾಗಿ, ನಮ್ಮ ಪಾಲಿಗಾಗಿ ಕಾವೇರಿ, ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು ವಿಚಾರಗಳಲ್ಲಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ತಮಿಳುನಾಡು ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ, ಈಶ್ವರ್‌ ಖಂಡ್ರೆ, ಸಂಸದ ಡಿ.ಕೆ. ಸುರೇಶ್‌, 12 ರಾಜ್ಯಗಳ ಯುವ ಕಾಂಗ್ರೆಸ್‌ ಅಧ್ಯಕ್ಷರು ಸೇರಿ ಹಲವರು ಭಾಗವಹಿಸಿದ್ದರು.