ತಾಯಿ ಗರ್ಭದಲ್ಲಿದ್ದಾಗಲೇ ಪೌಷ್ಟಿಕಾಂಶವನ್ನು ನೀಡುವ ಮೂಲಕ ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು (ಜು.18): ತಾಯಿ ಗರ್ಭದಲ್ಲಿದ್ದಾಗಲೇ ಪೌಷ್ಟಿಕಾಂಶವನ್ನು ನೀಡುವ ಮೂಲಕ ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೈನ್‌ ಬೋ ಮಕ್ಕಳ ಆಸ್ಪತ್ರೆ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿನ ವಿಶೇಷ ನವೀಕರಣಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ದರ (ಐಎಂಆರ್‌) ಎರಡಂಕಿಯಷ್ಟಿದೆ. ಆ ಪ್ರಮಾಣವನ್ನು ಒಂದಂಕಿಗೆ (10ಕ್ಕಿಂತ ಕಡಿಮೆ) ಇಳಿಸಬೇಕಿದೆ. 

ಶಿಶುಗಳ ಮರಣಕ್ಕೆ ಅಪೌಷ್ಟಿಕತೆಯೇ ಪ್ರಮುಖ ಕಾರಣವಾಗಿದೆ. ಜತೆಗೆ ಅಪೌಷ್ಟಿಕತೆಯಿಂದ ವಿವಿಧ ಸಮಸ್ಯೆಗಳೊಂದಿಗೆ ಹುಟ್ಟುವ ಮಕ್ಕಳ ಸಂಖ್ಯೆಯು ಹೆಚ್ಚಿದೆ. ಈ ಸಮಸ್ಯೆಗಳ ಪರಿಹಾರವಾಗಬೇಕೆಂದರೆ ಗರ್ಭದಲ್ಲಿಯೇ ಮಗುವಿಗೆ ಪೌಷ್ಟಿಕಾಂಶ ದೊರೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಣಂತಿಯರಿಗೆ, ಐದು ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮುಖ್ಯವಾಗಿ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ನೀಡುವ ಆಹಾರವನ್ನೇ ಸಾಮಾನ್ಯ ಅಪೌಷ್ಟಿಕತೆಯುಳ್ಳ ಮಕ್ಕಳಿಗೂ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ 5-6 ಜಿಲ್ಲೆಗಳಲ್ಲಿ ತಾಯಿ ಮರಣ ಪ್ರಮಾಣದಲ್ಲಿ (ಎಂಎಂಆರ್‌) ಹೆಚ್ಚಿದೆ. ತಾಯಿಯ ಆರೋಗ್ಯ ಉತ್ತಮವಾಗಿದ್ದರೆ ಮಕ್ಕಳ ಅಪೌಷ್ಟಿಕತೆಯು ತಗ್ಗಲಿದೆ. 

ಕೈಗಾರಿಕೆಗಳಿಗೂ ಸ್ವಯಂ ಘೋಷಿತ ತೆರಿಗೆ: ಸಿಎಂ ಬೊಮ್ಮಾಯಿ

ಬಡತನದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಾರದು ಎಂಬ ನಿಟ್ಟಿನಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಆರೋಗ್ಯ, ಅಪೌಷ್ಟಿಕತೆ, ಮಹಿಳಾ ಮತ್ತು ಮಕ್ಕಳ ಆರೋಗ್ಯದ ಮಾನದಂಡಗಳನ್ನು ಇರಿಸಿಕೊಂಡು ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ತೋಟಗಾರಿಕೆ ಸಚಿವ ಮುನಿರತ್ನ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌, ರೈನ್‌ ಬೋ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ಪಿ ನಿತ್ಯಾನಂದ, ರೈನ್‌ಬೋ ಮಕ್ಕಳ ಆಸ್ಪತ್ರೆಯ ಕ್ಲಿನಿಕಲ ನಿರ್ದೇಶಕ ಡಾ. ಅರವಿಂದ್‌ ಶೆಣೈ ಉಪಸ್ಥಿತರಿದ್ದರು.

ದೇವರು ಮತ್ತು ತಾಯಿ ಪೈಕಿ ನಾನು ತಾಯಿಯನ್ನು ಆಯ್ಕೆ ಮಾಡುವೆ: ಎಲ್ಲಾ ಸಂಬಂಧಗಳು ಜನ್ಮತಾಳಿದ ನಂತರ ಹುಟ್ಟಿಕೊಳ್ಳುತ್ತವೆ. ಆದರೆ ತಾಯಿ-ಮಗುವಿನ ಸಂಬಂಧವು ಜನಿಸುವ ಮೊದಲೇ ರೂಪುಗೊಂಡಿರುತ್ತದೆ. ಯಾರಾದರೂ ನನ್ನನ್ನು ತಾಯಿ ಮತ್ತು ದೇವರಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿದರೆ, ನಾನು ಯಾವಾಗಲೂ ತಾಯಿಯನ್ನು ಆಯ್ಕೆ ಮಾಡುತ್ತೇನೆ. ತಾಯಿಯ ಪ್ರೀತಿ ಬೇಷರತ್‌ ಮತ್ತು ನಿಷ್ಕಲ್ಮಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಮ್ಮೇಳದಲ್ಲಿ ಶಿಶುವೈದ್ಯರಿಂದ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಾಗೋಷ್ಠಿ, ಅನಾರೋಗ್ಯ ಪೀಡಿತ ನವಜಾತ ಶಿಶುಗಳು ಮತ್ತು ಎಳೆಯ ಮಕ್ಕಳ ಆರೋಗ್ಯ ನಿರ್ವಹಣೆ, ಮಕ್ಕಳ ತುರ್ತು ನಿಗಾಘಟಕದ ಸಿಬ್ಬಂದಿಗಳ ಕಾರ್ಯಾಗಾರ ನಡೆದವು.

ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ಗೆ ಸಿಎಂ ಶಂಕು: ಕೃಷಿ ಉದ್ಯಮ ನೀತಿಯ ಭರವಸೆ

ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಪ್ರಸೂತಿ ಮತ್ತು ಮಕ್ಕಳ ತಜ್ಞರ ಪಾತ್ರ ಹೆಚ್ಚಿದೆ. ರೈಬೋ ಮಕ್ಕಳ ಆಸ್ಪತ್ರೆ ಆಯೋಜಿಸಿರುವ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಪರಿಶೀಲಿಸಿ ಸಮಾಜದ ಒಳಿತಿಗಾಗಿ ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಲಾಗುವುದು. ಇನ್ನು ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನವನ್ನು ಹೆಚ್ವಿಸಲಾಗಿದೆ. ವೈಜ್ಞಾನಿಕವಾಗಿ ಆಲೋಚಿಸುವ ಸಚಿವ ಹಾಗೂ ಅಧಿಕಾರಗಳ ತಂಡ ನಮ್ಮಲ್ಲಿದ್ದು, ಪ್ರಗತಿಪರ ಚಿಂತನೆಯುಳ್ಳ ಸರ್ಕಾರ ನಮ್ಮದು. ತಾಂತ್ರಿಕ ಆಧಾರಿತ ರಾಜ್ಯ ನಮ್ಮದು. ಹಳ್ಳಿಗಳಲ್ಲಿ ಕೂಡ ನಮ್ಮ ಯುವಕರು ತಾಂತ್ರಿಕವಾಗಿ ಕೌಶಲ್ಯಯುಳ್ಳವರಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.